ಮಂಗಳೂರು :ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾದ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಕೇಂದ್ರದ ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ. ಎಲ್ಲಿಂದ ಸ್ಯಾಟಲೈಟ್ ಫೋನ್ ಆ್ಯಕ್ಟೀವ್ ಆಗುತ್ತಿವೆ ಎಂಬ ಸ್ಥಳದ ಗುರುತನ್ನು ಕೇಂದ್ರದವರು ಕೊಡಬೇಕಾಗುತ್ತದೆ. ಈ ಹಿಂದೆ ಕೂಡ ಹಲವರನ್ನು ಈ ಸಂಬಂಧ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.
ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕರಾವಳಿಯ ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಇದು ಆ್ಯಕ್ಟೀವ್ ಆಗುತ್ತದೆ. ಆದರೆ, ಕೆಲವು ಬಾರಿ ತಪ್ಪಾಗಿ ಅದು ಒಳಗಿನಿಂದ ಆ್ಯಕ್ಟೀವ್ ಆಗಿದೆ ಎಂಬುದನ್ನು ತೋರಿಸುತ್ತದೆ. ಸ್ಯಾಟಲೈಟ್ ಫೋನ್ ಆ್ಯಕ್ಟೀವ್ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು. ನಾವು ಯಾವುದನ್ನು ಬಿಡುವುದಿಲ್ಲ. ಮೋದಿ ಸರ್ಕಾರ ಬಂದ ಮೇಲೆ ಜಮ್ಮು-ಕಾಶ್ಮೀರ ಹೊರತುಪಡಿಸಿ ಬೇರೆ ಕಡೆ ಬಾಂಬ್ ಸ್ಪೋಟದಂತಹ ಘಟನೆಗಳು ನಡೆಯುತ್ತಿಲ್ಲ. ಜನರ ಶಾಂತಿಯುತ ಬದುಕಿಗೋಸ್ಕರ ಕೇಂದ್ರ ಮತ್ತು ರಾಜ್ಯ ಕಣ್ಗಾವಲು ಇರಿಸಿದೆ ಎಂದರು.
ಸೂಕ್ತ ದಾಖಲೆ ಇಲ್ಲದಿದ್ದರೆ ವಿದೇಶಿಗರು ಅರೆಸ್ಟ್ ! :ರಾಜ್ಯದಲ್ಲಿ ವಿದೇಶಿಗರು ಅಕ್ರಮವಾಗಿ ವಾಸವಿರುವುದನ್ನು ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿಯೂ ಅಕ್ರಮವಾಗಿ ವಾಸವಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಸೂಚಿಸಲಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆಗಳನ್ನು ಕಡ್ಡಾಯವಾಗಿ ಸರ್ವೆ ಮಾಡಿ ಗುರುತಿಸಲು ತಿಳಿಸಲಾಗಿದೆ. ಇನ್ನೆರಡು ವಾರದಲ್ಲಿ ಈ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ. ಪಾಸ್‌ಪೋರ್ಟ್, ವೀಸಾ ಇಲ್ಲದೆ ಇರುವುದು, ಅದರ ಅವಧಿ ಮುಗಿದಿರುವವರು, ಅಕ್ರಮವಾಗಿ ನುಸುಳಿರುವವರನ್ನು ಬಂಧಿಸಲಾಗುವುದು ಎಂದರು.