ಉಳ್ಳಾಲ(ದಕ್ಷಿಣ ಕನ್ನಡ) : ಪ್ರತ್ಯೇಕ ಘಟನೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಮಗು ಹಾಗೂ ಯುವಕನೋರ್ವನನ್ನು ಗೃಹರಕ್ಷಕ ದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಭಾನುವಾರ ಸಂಜೆ ನಡೆದಿದೆ. ಬೋಳಿಯಾರು ನಿವಾಸಿ ಶರೀಫ್(22) ಮತ್ತು ಎರಡು ವರ್ಷದ ಮಗುವನ್ನು ರಕ್ಷಿಸಲಾಗಿದೆ.
ಅರ್ಧ ಗಂಟೆ ಅವಧಿಯಲ್ಲಿ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಎರಡು ಜೀವಗಳನ್ನು ಗೃಹರಕ್ಷಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ನೇಹಿತರ ಜೊತೆಗೆ ವಿಹಾರಕ್ಕೆಂದು ಬಂದಿದ್ದ ಶರೀಫ್ ಅಲೆಗಳ ನಡುವೆ ಸಿಲುಕಿ ಜೀವರಕ್ಷಣೆಗೆ ಒದ್ದಾಡುತ್ತಿದ್ದರು. ಇದನ್ನು ಗಮನಿಸಿ ಸ್ಥಳದಲ್ಲಿದ್ದ ಗೃಹರಕ್ಷಕ ದಳ ಸಿಬ್ಬಂದಿ ಕಲ್ಲುಗಳೆಡೆಯಲ್ಲಿ ಸಿಲುಕಿದ್ದ ಶರೀಫ್ನನ್ನು ರಕ್ಷಿಸಿದರು.