ಮಂಗಳೂರು : ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಘೋಷಿಸಿದ್ದಾರೆ. ನಗರದಲ್ಲಿ ಇಂದು ಪಶ್ಚಿಮ ವಲಯ ಐಜಿಪಿ ವ್ಯಾಪ್ತಿಯ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ಇಂದು ಭಯದ ವಾತಾವರಣ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ನಾವು ತಡೆಯಲಿದ್ದೇವೆ. ಕೋಮುಸೌಹಾರ್ದತೆಯನ್ನು ತರಲು ಪೊಲೀಸರಿಗೆ ಕಠಿಣ ಸೂಚನೆ ನೀಡಿದ್ದೇನೆ. ನೈತಿಕ ಪೊಲೀಸ್ಗಿರಿ ಇಲ್ಲಿ ತುಂಬಾ ನಡೆಯುತ್ತಿದೆ. ನೈತಿಕ ಪೊಲೀಸ್ ಗಿರಿಯನ್ನು ನಾವು ತಡೆಯದಿದ್ದರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ. ನೈತಿಕ ಪೊಲೀಸ್ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇದನ್ನು ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತಿದ್ದೇವೆ ಎಂದರು.
ಕರಾವಳಿ ಭಾಗದಲ್ಲಿ ಒಳ್ಳೆಯ ಜನ ಇದ್ದಾರೆ ಎಂಬ ನಂಬಿಕೆ ಇದೆ. ಆದರೆ ಅದರ ಜೊತೆಗೆ ದ.ಕ ಜಿಲ್ಲೆಯಲ್ಲಿ ಶಾಂತಿ ಇಲ್ಲ, ಕೋಮು ಸಾಮರಸ್ಯ ಇಲ್ಲ ಎಂಬ ಮಾತೂ ಇದೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷನಾದ ಸಂದರ್ಭದಲ್ಲೂ ಇಪ್ಪತ್ತು ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದೆ. ಆಗ ಇಲ್ಲಿನ ಜನ ಶಾಂತಿ ನೆಲೆಸುವಂತೆ ಮಾಡಿ ಎಂಬ ಮಾತೂ ಹೇಳಿದ್ದಾರೆ. ಕೋಮು ಸೌಹಾರ್ದತೆಗೆ ಈ ಹಿಂದೆ ಪಾದಯಾತ್ರೆಯನ್ನೂ ಮಾಡಿದ್ದೆ ಎಂದು ಹೇಳಿದರು.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಈ ವಿಂಗ್ ಪ್ರಾರಂಭ ಮಾಡುತ್ತಿದ್ದೇವೆ. ಈ ವಿಂಗ್ ನಲ್ಲಿ ಸಮರ್ಥವಾದ ಅಧಿಕಾರಿಗಳು ಇರಲಿದ್ದಾರೆ. ಇದರ ರೂಪುರೇಷೆಯನ್ನು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ಮಾಡಲಿದ್ದಾರೆ. ಆ್ಯಂಟಿ ಕಮ್ಯೂನಲ್ ವಿಂಗ್ ನ್ನು ಮುಂದೆ ಎಲ್ಲೆಲ್ಲಿ ಅವಶ್ಯಕತೆ ಬರುತ್ತದೆಯೊ ಪ್ರಾರಂಭಿಸುತ್ತೇವೆ. ಇರುವ ಪೊಲೀಸ್ ಬಲದಲ್ಲಿಯೆ ಈ ತಂಡವನ್ನು ಮಾಡಲಿದ್ದೇವೆ. ಈ ವಿಂಗ್ ಕಾನೂನಿನ ಚೌಕಟ್ಟು ಮೀರುವವರನ್ನು, ಸೈಬರ್ ಕ್ರೈಮ್ ಮೂಲಕ ಕೋಮು ದ್ವೇಷ ಹರಡುವವರನ್ನು, ನೈತಿಕ ಪೊಲೀಸ್ಗಿರಿ ಮಾಡುವವರನ್ನು ಹತ್ತಿಕ್ಕಲಿದೆ. ಈ ವಿಂಗ್ ನ ಅಧಿಕಾರಿಗಳು ಕಾಲೇಜಿಗೆ ಹೋಗಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದರು.
ಯಾರೇ ಆಗಲಿ ಎಷ್ಟು ದೊಡ್ಡ ಹುದ್ದೆಯಲ್ಲಿರಲಿ, ಕಾನೂನು ಕೈಗೆತ್ತಿಕೊಂಡರೆ ಪೊಲೀಸ್ ಇಲಾಖೆ ಬಿಡುವುದಿಲ್ಲ. ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಷ್ಟ ಬಂದ ಹಾಗೆ ಮಾತಾಡಿದ್ರೆ ಕಾನೂನು ಇದೆ. ಕಾನೂನು ನೋಡಿಕೊಳ್ಳುತ್ತದೆ. ಪ್ರಚೋದನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರಿಯೋಡಿಕಲ್ ರಿವ್ಯೂ ಮಾಡಿ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.