ಮಂಗಳೂರು:ಹಿಂದೂ ಸಮಾಜ ಫುಟ್ಬಾಲ್ ಅಲ್ಲ. ಕಲ್ಲು ಗುಂಡು ಇದ್ದಂತೆ, ಕಾಲು ಮುರಿಯುತ್ತದೆ ಎಂದು ಹಿಂಜಾವೇ ಪ್ರಾಂತ್ಯ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಸ್ಥಾನ ಬೆಟ್ಟದ ಕೆಳಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಭಾನುವಾರ 'ರುದ್ರಗಿರಿಯ ರಣಕಹಳೆ' ಎಂಬ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅವರು ದ.ಕ. ಜಿಲ್ಲಾಧಿಕಾರಿ ವಿರುದ್ಧ ಕೊರಳಪಟ್ಟಿ ಹಿಡಿಯಬೇಕು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಜಗದೀಶ್ ಕಾರಂತ್ ವಿರುದ್ಧ ಜಿಲ್ಲಾಧಿಕಾರಿ ಡಾ.ರಾಜೇಂದ್ರರವರು ದೂರು ನೀಡಿದ್ದಾರೆ. ಆ ಬಳಿಕ ಹಿಂದೂ ಜಾಗರಣ ವೇದಿಕೆ ಮತ್ತು ಜಿಲ್ಲಾಧಿಕಾರಿ ನಡುವೆ ಜಟಾಪಟಿ ತಾರಕಕ್ಕೇರಿದೆ. ಇದೀಗ ಕೇಸ್ ವಾಪಾಸ್ ಪಡೆದುಕೊಳ್ಳುವಂತೆ ಸುದ್ದಿಗೋಷ್ಠಿ ನಡೆಸಿ ಹಿಂಜಾವೇ ಮುಖಂಡರು ಆಗ್ರಹಿದ್ದಾರೆ.
ಜಿಲ್ಲಾಧಿಕಾರಿ ದೂರು ನೀಡಿದ ಬಳಿಕ ಶ್ರೀಕಾರಿಂಜ ಕ್ಷೇತ್ರದಲ್ಲಿರುವ ಭಗವಾ ಧ್ವಜ ತೆಗೆಯಲು ಪೊಲೀಸರು ಸೂಚನೆ ನೀಡಿದ್ದಾರೆ. ಪೂಂಜಾಲಕಟ್ಟೆ ಎಸ್ಐ ಸೌಮ್ಯಾ ಅವರು ಭಗಾವಾಧ್ವಜ ತೆಗೆಯಲು ಹೇಳಿದ್ದಾರೆ. ಅವರಿಗೆ ತಾಕತ್ ಇದ್ದಲ್ಲಿ ಭಗವಾಧ್ವಜ ತೆಗೆದು ನೋಡಲಿ. ನಾವು ಒಂದು ವಾರದೊಳಗೆ ಸಾವಿರ ಭಗವಾಧ್ವಜ ಹಾಕುತ್ತೇವೆ ಎಂದು ಗುಡುಗಿದರು.