ಉಪ್ಪಿನಂಗಡಿ(ದಕ್ಷಿಣ ಕನ್ನಡ):ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದ ಮತ್ತೆ ವಿಕೋಪಕ್ಕೆ ತಿರುಗಿದ್ದು, ಈ ಘಟನೆಯ ವರದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೆಲ ವಿದ್ಯಾರ್ಥಿಗಳು ಹಲ್ಲೆಗೆ ಮುಂದಾಗಿ, ದಿಗ್ಬಂಧನ ವಿಧಿಸಿದ ಘಟನೆ ಗುರುವಾರ ನಡೆದಿದೆ. ಈ ಸಂಬಂಧ ಪತ್ರಕರ್ತರು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಬಗ್ಗೆ ಮೃದು ಧೋರಣೆ ತೋರಲಾಗುತ್ತಿದೆ ಎಂದು ಆರೋಪಿಸಿ ಒಂದು ಗುಂಪಿನ ಪರವಾದ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಬಂದಿದ್ದು, ಅವರೆಲ್ಲ ಕಾಲೇಜಿನ ವರಾಂಡದಲ್ಲಿ ನಿಂತಿದ್ದರು. ಈ ಸಮಯದಲ್ಲಿ ಹಿಜಾಬ್ ಪರವಾದ ಗುಂಪೊಂದು ಅಲ್ಲೇ ಜಮಾಯಿಸಿತ್ತು. ಈ ಬಗ್ಗೆ ಸುದ್ದಿ ತಿಳಿದ ಮಾಧ್ಯಮ ಪ್ರತಿನಿಧಿಗಳು ವರದಿ ಮಾಡುವ ಸಲುವಾಗಿ ಕಾಲೇಜಿಗೆ ತೆರಳಿದ್ದರು.
ಹಿಜಾಬ್ ಪರ ಇರುವ ವಿದ್ಯಾರ್ಥಿಗಳ ಗುಂಪು ಏಕಾಏಕಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೇ, ವರದಿಗಾಗಿ ತೆಗೆಯಲಾಗಿದ್ದ ವಿಡಿಯೋವನ್ನು ಕಾಲೇಜಿನ ಕಚೇರಿಯ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಕೂಡಿಹಾಕಿ ಒತ್ತಾಯ ಪೂರ್ವಕವಾಗಿ ಡೀಲಿಟ್ ಮಾಡಿ ಬೆದರಿಕೆ ಹಾಕಿ ಹಲ್ಲೆಗೆ ಮುಂದಾಗಿದ್ದರು. ತಕ್ಷಣವೇ ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಬ ಪತ್ರಕರ್ತ ಸಂಘದ ವತಿಯಿಂದ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಮತ್ತು ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ಡಿವೈಎಸ್ಪಿ ಡಾ. ಗಾನಾ ಪಿ. ಕುಮಾರ್ ಮತ್ತು ತಹಸೀಲ್ದಾರ್ ಅನಂತಶಂಕರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ:ಹಿಜಾಬ್ ವಿವಾದ.. 16 ವಿದ್ಯಾರ್ಥಿನಿಯರಿಗೆ ಕಾಲೇಜ್ ಪ್ರವೇಶ ನಿರಾಕರಣೆ, 6 ವಿದ್ಯಾರ್ಥಿನಿಯರು ಅಮಾನತು!