ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ನಗರದ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ನಡೆದ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಜಾರಿ ಮಾಡಿದ್ದ ಶಿಸ್ತು ಕ್ರಮದ ನೋಟಿಸ್ಗೆ ಇಬ್ಬರು ವಿದ್ಯಾರ್ಥಿನಿಯರು ಉತ್ತರ ನೀಡಿದ್ದಾರೆ.
ಹಿಜಾಬ್ ವಿವಾದದ ಬಳಿಕ ಮೂವರು ವಿದ್ಯಾರ್ಥಿನಿಯರು ಮಂಗಳೂರು ವಿವಿಯ ಸಮನ್ವಯ ಸಮಿತಿಯ ಜೊತೆಗೆ ಮಾಧ್ಯಮಗೋಷ್ಟಿ ನಡೆಸಿದ್ದರು. ಈ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಮೂರು ದಿನಗಳೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದರು.
ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ ಎಂಬ ಆದೇಶವಿರುತ್ತದೆ. ಈ ಬಗ್ಗೆ ವಿಶ್ವವಿದ್ಯಾಲಯದಿಂದ ಮಾರ್ಗಸೂಚಿ ಹಾಗೂ ಹೈಕೋರ್ಟ್ನ ಆದೇಶವನ್ನು ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಗಿದೆ. ಈ ಕಾಲೇಜಿನಲ್ಲಿ ಸುಮಾರು 1,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇವಲ ಬೆರಳೆಣಿಕೆಯ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗಳಿಗೆ ಹಾಜರಾಗದೆ ಕಾಲೇಜಿನ ಆವರಣದಲ್ಲಿ ಆತಂಕ, ಶಾಂತಿಭಂಗ ಮತ್ತು ಅಶಿಸ್ತು ಸೃಷ್ಟಿ ಮಾಡುತ್ತಿರುವುದು ಕಂಡುಬಂದಿರುತ್ತದೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು.