ಕರ್ನಾಟಕ

karnataka

ಹಿಜಾಬ್​ ವಿವಾದ : ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು

By

Published : Mar 18, 2022, 4:57 PM IST

ನೀವು ಹೀಗೆ ಕಾಲೇಜಿನ ಹೊರಗಡೆ ನಿಂತರೆ ಪರೀಕ್ಷೆ ಬರೆಯುತ್ತಿರುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಹಿಜಾಬ್ ಅವಕಾಶಕ್ಕಾಗಿ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿಯೇ ಹೋರಾಟ ಮಾಡೋಣ ಎಂದರು. ಇವರ ಮಾತಿಗೆ ಒಪ್ಪಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಕಾಲೇಜಿನಿಂದ ನಿರ್ಗಮಿಸಿದರು..

Students go home by boycotting exam
ಪರೀಕ್ಷೆ ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಯರು

ಉಪ್ಪಿನಂಗಡಿ(ದಕ್ಷಿಣಕನ್ನಡ) :ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತುಕೊಳ್ಳಲು ಅವಕಾಶ ನೀಡಿಲ್ಲ ಎಂದು ಪರೀಕ್ಷೆಯನ್ನೂ ಬರೆಯದೇ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಮನೆಗೆ ತೆರಳಿದ ಘಟನೆ ಶುಕ್ರವಾರ ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಉಪ್ಪಿನಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶುಕ್ರವಾರ ಹಿಜಾಬ್ ಧರಿಸಿಕೊಂಡು ತರಗತಿಯೊಳಗೆ ಪ್ರವೇಶಿಸಲು ಮುಂದಾಗಿದ್ದರು. ಆಗ ಹಿಜಾಬ್ ಕುರಿತಾದ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆ ಉಪನ್ಯಾಸಕರು ಅದಕ್ಕೆ ಅವಕಾಶ ಕೊಡಲಿಲ್ಲ.

ಅದನ್ನು ವಿರೋಧಿಸಿದ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರು, ಕಾಲೇಜಿನ ಆವರಣದಲ್ಲಿ ನಿಂತುಕೊಂಡು ಪ್ರತಿಭಟಿಸಿದರು. ಇವರಿಗೆ ಬೆಂಬಲವಾಗಿ ತರಗತಿಯೊಳಗಿದ್ದ ಕೆಲ ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಇವರೊಂದಿಗೆ ಸೇರಿಕೊಂಡರು.

ಹಿಜಾಬ್ ತೆಗೆದು ತರಗತಿಯೊಳಗೆ ಬನ್ನಿ.. ಪರೀಕ್ಷೆ ಇದ್ದವರು ಹಿಜಾಬ್ ತೆಗೆದು ಬಂದು ಪರೀಕ್ಷೆ ಬರೆಯಿರಿ ಎಂದು ಉಪನ್ಯಾಸಕರು ವಿದ್ಯಾರ್ಥಿಗಳ ಮನವೊಲಿಕೆಗೆ ಪ್ರಯತ್ನಿಸಿದರೂ, ಅವರು ತಮ್ಮ ಹಠದಿಂದ ಹಿಂದೆ ಸರಿಯದೇ ಅಲ್ಲೇ ನಿಂತುಕೊಂಡರು.

ಹಿಜಾಬ್​ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬಳಿಕ ಸ್ಥಳೀಯ ಕೆಲವು ಪ್ರಮುಖರು ಕಾಲೇಜಿಗೆ ಆಗಮಿಸಿ, ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದರು. ಆಗ ಪ್ರಾಂಶುಪಾಲರು ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನವನ್ನು ಅವರಿಗೆ ತಿಳಿಸಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿಕೊಂಡವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:'ಸರ್ಕಾರದ ಉತ್ತರದಂತೆ ಜನ್ಮದಿನದ ಶುಭಕೋರಿಕೆಯೇ?' ಸದನದಲ್ಲಿ ನಗು ತಂದ ಬರ್ತ್‌ಡೇ ವಿಶಸ್!

ಬಳಿಕ ಹೊರಗೆ ಬಂದ ಪ್ರಮುಖರು ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ಪರ ನಾವು ಕೂಡ ಇದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ, ಈಗ ನಿಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಕಾಲೇಜಿನ ತೀರ್ಮಾನಕ್ಕೆ ಒಪ್ಪಿ ನೀವು ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು.

ಆದರೆ, ವಿದ್ಯಾರ್ಥಿಗಳು ಅವರ ಮಾತನ್ನು ಕೇಳದೇ ಯಾವುದೇ ಕಾರಣಕ್ಕೂ ನಾವು ಹಿಜಾಬ್ ತೆಗೆದು ಪರೀಕ್ಷೆ ಬರೆಯುವುದಿಲ್ಲ ಎಂದು ಪಟ್ಟು ಹಿಡಿದರು. ಸತತ ಪ್ರಯತ್ನ ಮಾಡಿಯೂ ಇವರ ಮನವೊಲಿಸಲು ಸಾಧ್ಯವಾಗದಿದ್ದಾಗ ಅಲ್ಲಿದ್ದ ಮುಸ್ಲಿಂ ಮುಖಂಡರು, ನೀವು ತರಗತಿಗೆ ಬರುವುದಿಲ್ಲವಾದರೆ ಮನೆಗೆ ಹೋಗಿ, ಇಲ್ಲಿ ಪರೀಕ್ಷೆ ನಡೆಯುತ್ತಿದೆ.

ನೀವು ಹೀಗೆ ಕಾಲೇಜಿನ ಹೊರಗಡೆ ನಿಂತರೆ ಪರೀಕ್ಷೆ ಬರೆಯುತ್ತಿರುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ. ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಹಿಜಾಬ್ ಅವಕಾಶಕ್ಕಾಗಿ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿಯೇ ಹೋರಾಟ ಮಾಡೋಣ ಎಂದರು. ಇವರ ಮಾತಿಗೆ ಒಪ್ಪಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಕಾಲೇಜಿನಿಂದ ನಿರ್ಗಮಿಸಿದರು.

For All Latest Updates

ABOUT THE AUTHOR

...view details