ಬೆಂಗಳೂರು/ಪುತ್ತೂರು: ಪುತ್ತೂರಿನ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯು ಠೇವಣಿ ಇಟ್ಟಿರುವ ಹಣ ವಾಪಸ್ ಕೊಡುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಠೇವಣಿದಾರ ಶ್ರೀಶ ಕೇಶವ ಯಡಪಡಿತ್ತಾಯ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ಕೇಂದ್ರ ಗೃಹ ಸಚಿವಾಲಯ, ರಾಜ್ಯ ಗೃಹ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಕೇರಳ ರಾಜ್ಯದ ಗೃಹ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಶರ್ಮಹಾನ್ ವಿವಿಧೋದ್ದೇಶ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಗೆ ನೋಟಿಸ್ ಜಾರಿ ಮಾಡಿದೆ.
ಅಲ್ಲದೆ, ಅರ್ಜಿ ಸಂಬಂಧ ಫೆ. 26ರೊಳಗೆ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚಿಸಿದ್ದು, ಈವರೆಗೆ ಠೇವಣಿದಾರರ ಹಿತರಕ್ಷಣಾ ಕಾಯ್ದೆಯನ್ವಯ ಸಕ್ಷಮ ಪ್ರಾಧಿಕಾರ ಯಾಕೆ ನೇಮಿಸಿಲ್ಲ ಎಂಬ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಗೆಯೇ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿದೆ.
ಅರ್ಜಿದಾರರ ಕೋರಿಕೆ:ಅರ್ಜಿದಾರ ಶ್ರೀಶ ಕೇಶವ ಯಡಪಡಿತ್ತಾಯ ಅವರು ಶರ್ಮಹಾನ್ ಸೌಹಾರ್ದ ಕೋ-ಅಪರೇಟಿವ್ ಸೋಸೈಟಿಯಲ್ಲಿ 2016ರ ಜ. 1ರಿಂದ 2018ರ ಏ. 1ರ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಶೇ. 12ರ ಬಡ್ಡಿ ದರದಲ್ಲಿ ಒಟ್ಟು 75.52 ಲಕ್ಷ ರೂ. ಠೇವಣಿ ಇಟ್ಟಿದ್ದಾರೆ. ಇದರಲ್ಲಿ 48 ಲಕ್ಷ ರೂ. ಮೊತ್ತಕ್ಕೆ ಠೇವಣಿ ಅವಧಿ ಮುಗಿದಿದೆ. ಆದರೆ ಹಲವು ಬಾರಿ ಮನವಿ ಮಾಡಿದರೂ ಹಣ ವಾಪಸ್ ನೀಡಿಲ್ಲ ಎಂದು ಆರೋಪಿರುವ ಅರ್ಜಿದಾರರು, ಈ ಬಗ್ಗೆ 2018ರ ಮೇ 16ರಂದು ಪುತ್ತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಮಂಗಳೂರು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಪ್ರಕರಣದ ಪಾರದರ್ಶಕ ಹಾಗೂ ತ್ವರಿತ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಬೇಕು. ಸಕ್ಷಮ ಪ್ರಾಧಿಕಾರ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಸೊಸೈಟಿಯ ಮುಖ್ಯಸ್ಥರು ಹಾಗೂ ನಿರ್ದೇಶಕರ ವಿರುದ್ಧ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.