ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಪತ್ನಿ ಹೇಮಾವತಿ ಹೆಗ್ಗಡೆ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮತ್ತು ತುಳು ನಾಟಕ ಮತ್ತು ಸಿನಿಮಾ ಕಲಾವಿದ ದೇವದಾಸ್ ಕಾಪಿಕಾಡ್ ಅವರಿಗೆ ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾನಿಲಯದ ಕುಲಾಧಿಪತಿ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರದಾನ ಮಾಡಿದರು.
ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆದ 40ನೇ ಘಟಿಕೋತ್ಸವದಲ್ಲಿ ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಹೇಮಾವತಿ ಹೆಗ್ಗಡೆ ಅವರಿಗೆ ಗ್ರಾಮೀಣ ಪ್ರದೇಶದ ಮಹಿಳೆಯರ ಸಶಕ್ತೀಕರಣಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾಡಿದ ಸಾಮಾಜಿಕ ಸೇವೆ ಹಾಗೂ ದೇವದಾಸ್ ಕಾಪಿಕಾಡ್ ಅವರಿಗೆ ತುಳು ನಾಟಕ ಮತ್ತು ಸಿನಿಮಾದಲ್ಲಿ ಮಾಡಿದ ಸಾಧನೆಗಾಗಿ ಡಾಕ್ಟರೇಟ್ ನೀಡಲಾಯಿತು. ಇದೇ ವೇಳೆ ಡಿ.ಶಿವಾನಂದ ನಾಯ್ಕ್ ಅವರಿಗೆ ಡಿಎಸ್ಸಿ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
52 ವಿದ್ಯಾರ್ಥಿಗಳಿಗೆ ಚಿನ್ನದ ಪದಕ:ಈ ಬಾರಿಯಘಟಿಕೋತ್ಸವದಲ್ಲಿ 52 ವಿದ್ಯಾರ್ಥಿಗಳು ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದು, 16 ಮಂದಿ ವಿದೇಶಿ ವಿದ್ಯಾರ್ಥಿಗಳು ಸೇರಿದಂತೆ 153 ಮಂದಿ ಡಾಕ್ಟರೇಟ್ ಪಡೆದಿದ್ದಾರೆ. ವಿದೇಶಿ ವಿದ್ಯಾರ್ಥಿಗಳಲ್ಲಿ ಅಫ್ಘಾನಿಸ್ತಾನದ 3 ವಿದ್ಯಾರ್ಥಿಗಳು, ಇಥಿಯೋಪಿಯಾದ ಎರಡು ಹಾಗೂ ಘಾನ, ಇಂಡೋನೇಷ್ಯಾ, ಇರಾನ್ನ ತಲಾ ಒಬ್ಬ ವಿದ್ಯಾರ್ಥಿ ಡಾಕ್ಟರೇಟ್ ಪದವಿಗೆ ಸ್ವೀಕರಿಸಿದರು.
ವಿವಿಧ ಕೋರ್ಸ್ಗಳ ಒಟ್ಟು 192 ರ್‍ಯಾಂಕ್‌ಗಳಲ್ಲಿ 69 ವಿದ್ಯಾರ್ಥಿಗಳು ಪ್ರಥಮ ರ್‍ಯಾಂಕ್, 52 ವಿದ್ಯಾರ್ಥಿಗಳು ಚಿನ್ನದ ಪದಕ, 57 ವಿದ್ಯಾರ್ಥಿಗಳು ನಗದು ಬಹುಮಾನ ಪಡೆದರು. 200-21ನೇ ಸಾಲಿನಲ್ಲಿ ಪದವಿ ಪರೀಕ್ಷೆಯನ್ನು 30,654 ವಿದ್ಯಾರ್ಥಿಗಳು ಬರೆದಿದ್ದು, ಇದರಲ್ಲಿ 21,134 ವಿದ್ಯಾರ್ಥಿಗಳು (68.94%) ಉತ್ತಿರ್ಣರಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ 6,404 ವಿದ್ಯಾರ್ಥಿಗಳ ಪೈಕಿ 5,826 ವಿದ್ಯಾರ್ಥಿಗಳು (90.97%) ಉತ್ತೀರ್ಣರಾಗಿದ್ದಾರೆ.