ಮಂಗಳೂರು: ನಗರದಲ್ಲಿ ವಾರಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಇಂದು ಮತ್ತೆ ಶುರುವಾಗಿದೆ. ಇಂದು ಬೆಳಗ್ಗೆಯಿಂದ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಮಳೆ ಧಾರಾಕಾರವಾಗಿ ಸುರಿಯುತ್ತಿದೆ.
ಆಶ್ಲೇಷ ಮಳೆ ಆಗಸ್ಟ್ 2 ರಂದು ಆರಂಭವಾಗಿದ್ದು ಅಂದಿನಿಂದ ಮಳೆಯ ಅಬ್ಬರವೂ ಅಧಿಕವಾಗಿದೆ. ಮುಂಗಾರು ಆರಂಭವಾದ ಬಳಿಕ ಮಂಗಳೂರಿನಲ್ಲಿ ಮಳೆಯು ಬಿಟ್ಟು ಬಿಟ್ಟು ಸುರಿಯುತ್ತಿದ್ದು, ವಾಡಿಕೆಯ ಮಳೆಯಾಗಿರಲಿಲ್ಲ. ಆಟಿ(ಆಷಾಢ)ಯ ಮೊದಲ 15 ದಿನಗಳಲ್ಲಿಯೂ ಹೇಳಿಕೊಳ್ಳುವಂತಹ ಮಳೆ ಸುರಿದಿರಲಿಲ್ಲ. ಆದರೆ ಈ ಒಂದು ವಾರದಲ್ಲಿ ಮಳೆಯ ಪ್ರಮಾಣ ಅಧಿಕವಾಗಿದ್ದು, ಜಿಲ್ಲೆಯ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ.
ಮಳೆ ಸುರಿಯುತ್ತಿರುವ ಪ್ರಮಾಣ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ 1 ರಿಂದ ಇಂದು ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಣೆಯಾಗಿತ್ತು. ಇಂದು ಬೆಳಗ್ಗೆ 9ರಿಂದ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕರು ನದಿ ಹಾಗೂ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಿದೆ. ಅಲ್ಲದೆ ಅಪಾಯಕಾರಿ ಮರ, ವಿದ್ಯುತ್ ಕಂಬ, ಮರಗಳಿದ್ದಲ್ಲಿ ಅಲ್ಲಿಂದ ತೆರವುಗೊಂಡು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದೆ. ಯಾವುದೇ ಪ್ರಾಕೃತಿಕ ವಿಕೋಪ ಕಂಡ ಬಂದಲ್ಲಿಯೂ ಟೋಲ್ ಫ್ರೀ ಸಂಖ್ಯೆ 1077 ಹಾಗೂ ಮೊಬೈಲ್ ಸಂಖ್ಯೆ 9483908000 ಯನ್ನು ಸಂಪರ್ಕಿಸಬೇಕಾಗಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.