ಸುಬ್ರಹ್ಮಣ್ಯ: ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡಿರುವ ಹರಿಹರ, ಬಾಳುಗೋಡು, ಕೊಲ್ಲಮೊಗ್ರು ಕಲ್ಮಕಾರು, ಬಾಳುಗೋಡು ಐನಕಿದು ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದೆ. ಧಾರಾಕಾರ ಮಳೆಗೆ ಕೆಲವೆಡೆ ಭೂಕುಸಿತ ಉಂಟಾಗಿದೆ. ಆದಿ ಸುಬ್ರಮಣ್ಯ ಮುಳುಗಡೆಯಾಗಿದೆ.
ಮಾಹಿತಿ ಪ್ರಕಾರ, 200 ಮಿ.ಮೀ ಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕುಕ್ಕೆ ಸುಬ್ರಮಣ್ಯದಲ್ಲಿ ಆದಿ ಸುಬ್ರಮಣ್ಯಕ್ಕೆ ನೆರೆ ನೀರು ನುಗ್ಗಿದೆ. ಮುಂದಿನ ಎರಡು ದಿನ ಭಕ್ತರು ಕುಕ್ಕೆ ಸುಬ್ರಮಣ್ಯಕ್ಕೆ ಬಾರದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳನ್ನು ತಲುಪುವ ನಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಇದೇ ಮಾರ್ಗದಲ್ಲಿ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ನಲ್ಲಿ ತೆರಳುತ್ತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರ ನೀರು ಪಾಲಾಗಿದ್ದಾನೆ ಎನ್ನಲಾಗ್ತಿದೆ.
ಗುಡ್ಡ ಕುಸಿತ: ಸುಬ್ರಹ್ಮಣ್ಯ ಕುಮಾರಧಾರ ಪರ್ವತಮುಖಿಯಲ್ಲಿ ಗುಡ್ಡಕುಸಿದು ಮನೆಮೇಲೆ ಬಿದ್ದಿದೆ. ಕುಸುಮಧಾರ ಮತ್ತು ರೂಪಾಶ್ರೀ ದಂಪತಿಯ ಮಕ್ಕಳಾದ ಶೃತಿ (11) ಮತ್ತು ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಜೆಸಿಬಿಯಿಂದ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ:ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಂದಿನ 2 ದಿನ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಕುಕ್ಕೆ ಸುಬ್ರಹ್ಮಣ್ಯ ಮಳೆಯಾಳ ಮಾರ್ಗದ ಹರಿಹರ ಭಾಗದ ಗುಂಡಡ್ಕ ಸೇತುವೆ ಮುಳುಗಡೆಯಾಗಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಯೊಳಗೆ ನೀರು ನುಗ್ಗಿ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಕೊಲ್ಲಮೊಗ್ರು ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಕೇಶವ ಭಟ್ ಕಟ್ಟರವರ ಮನೆಯ ಹಿಂಬದಿಯ ಗುಡ್ಡ ಕುಸಿದಿದೆ. ಬಹುತೇಕ ಎಲ್ಲಾ ಕಡೆಗಳಲ್ಲೂ ರಬ್ಬರ್ ಮರಗಳು ಉರುಳಿ ಬಿದ್ದಿದೆ. ಹರಿಹರ ಮುಖ್ಯ ಪೇಟೆ ಬಳಿಯ ವ್ಯಾಪಾರಸ್ಥರೋರ್ವರ ಅಂಗಡಿಗೆ ನೆರೆ ನೀರು ನುಗ್ಗಿ ದಾಸ್ತಾನಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.