ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ನದಿ, ತೊರೆಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಮಳೆ, ಗಾಳಿಗೆ ಈವರೆಗೆ 50ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. 300ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. 10ಕ್ಕೂ ಅಧಿಕ ಟ್ರಾನ್ಸ್ಫಾರ್ಮರ್ಗಳು ಕೆಟ್ಟು ಹೋಗಿವೆ. ತೋಟಗಾರಿಕಾ ಬೆಳೆಗಳು ನೆಲಕಚ್ಚಿದ್ದರೆ, ನದಿಗಳ ಪ್ರವಾಹದಿಂದ ಅಲ್ಲಲ್ಲಿ ಭತ್ತದ ಬೆಳೆ ಪ್ರವಾಹಕ್ಕೆ ಕೊಚ್ಚಿಹೋಗಿದೆ.
ಜಿಲ್ಲಾಡಳಿತದಿಂದ ತೆರೆದಿರುವ 5 ಕಾಳಜಿ ಕೇಂದ್ರಗಳಿಗೆ 35ಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಕುಮಾರಧಾರಾ ನದಿ ನೀರಿನ ಮಟ್ಟ ಏರುತ್ತಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ನದಿ ನೀರಿಗೆ ತೀರ್ಥಸ್ನಾನಕ್ಕೆ ಹೋಗದಂತೆ ದೇವಾಲಯದ ಭಕ್ತರಿಗೆ ಸೂಚನೆಯನ್ನು ನೀಡಲಾಗಿದೆ. ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸ್ನಾನ ಘಟ್ಟದ ಬಳಿ ಕಾವಲು ಕಾಯುತ್ತಿದ್ದಾರೆ.
ರಸ್ತೆಗಳು ಜಲಾವೃತ:ಕುಮಾರಧಾರಾ ಹಾಗೂ ಉಪನದಿ ದರ್ಪಣ ತೀರ್ಥ ಮೈದುಂಬಿ ಹರಿಯುತ್ತಿದ್ದು, ಕುಮಾರಧಾರಾ ಸಮೀಪದ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿ ರಸ್ತೆ ಪ್ರವಾಹ ನೀರಿನಿಂದ ಜಲಾವೃತವಾಗಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ದರ್ಪಣ ತೀರ್ಥ ನದಿಪಾತ್ರದ ಕೃಷಿ ತೋಟಗಳಿಗೆ ನೀರುನುಗ್ಗಿದೆ. ಭಾನುವಾರ ರಸ್ತೆ ಜಲಾವೃತವಾದ ಹಿನ್ನೆಲೆಯಲ್ಲಿ ಜನರ ಮತ್ತು ವಾಹನಗಳ ಸಂಪರ್ಕ ಕಡಿತಗೊಂಡಿದ್ದು, ಸ್ಥಳದಲ್ಲಿ ಗೃಹರಕ್ಷಕ, ಎಸ್‌ಡಿಆರ್‌ಎಫ್ ತಂಡವನ್ನು ನಿಯೋಜನೆ ಮಾಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕೆಲಸಕ್ಕೆ ಹಾಗೂ ಇತರೆ ಕಾರ್ಯಕ್ಕೆ ಸುಬ್ರಹ್ಮಣ್ಯ ಭಾಗಕ್ಕೆ ಬಂದಿದ್ದ ಗರ್ಭಿಣಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿಯ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಜಲಾವೃತಗೊಂಡ ರಾಜ್ಯ ಹೆದ್ದಾರಿಯಲ್ಲಿ ದೋಣಿಯ ಮೂಲಕ ಎಸ್‌ಡಿಆರ್‌ಎಫ್ ತಂಡವು 8 ಜನರನ್ನು ಸುರಕ್ಷಿತವಾಗಿ ದಾಟಿಸಿ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ನೇತ್ರಾವತಿ, ಫಲ್ಗುಣಿ ನದಿ ಮತ್ತು ಉಪನದಿಗಳಲ್ಲಿ ಪ್ರವಾಹ ಉಕ್ಕೇರಿ ಹಲವು ತಗ್ಗು ಪ್ರದೇಶಗಳು, ಅಡಕೆ ತೋಟಗಳು ಜಲಾವೃತವಾಗಿವೆ. ಬಂಟ್ವಾಳ, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿ ಮಳೆಯ ಅಬ್ಬರಕ್ಕೆ ಸೇತುವೆ ಮುಳುಗಿದ್ದು, ಅಲ್ಲೇ ಸಿಕ್ಕಿಕೊಂಡಿದ್ದ ಪಿಕಪ್ ವಾಹನವನ್ನು ಪಂಚಾಯತ್ ಹಾಗೂ ಪೊಲೀಸ್ ಸಿಬ್ಬಂದಿ ಸಹಾಯದಿಂದ ಸ್ಥಳೀಯರು ಮೇಲಕ್ಕಿತ್ತಿದರು.