ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರಿ ಮಳೆಯಾಗುತ್ತಿದ್ದು, ಇಂದು ಕೂಡ ಮುಂದುವರೆದಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಇಂದು ರೆಡ್ ಅಲರ್ಟ್ ಘೋಷಿಸಿದೆ. ಜಿಲ್ಲೆಯ ಶಾಲೆ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಮೋರಿ ದಾಟುವಾಗ ನೀರಿಗೆ ಬಿದ್ದು ಓರ್ವ ಸಾವು:ಸೋಮೇಶ್ವರ ಪುರಸಭೆ ವ್ಯಾಪ್ತಿಯ ಪಿಲಾರಿನಲ್ಲಿ ಮನೆ ಸಂಪರ್ಕಿಸುವ ಮೋರಿ ದಾಟುವ ವೇಳೆ ಜಾರಿ ಬಿದ್ದು ಓರ್ವ ಸಾವನ್ನಪ್ಪಿದ್ದಾರೆ. ಮಂಗಳವಾರ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ನಿವಾಸಿ ಸುರೇಶ್ ಗಟ್ಟಿ (52) ಎಂಬವರು ನೀರಿಗೆ ಬಿದ್ದು ಮೃತಪಟ್ಟರು. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ಹೋಗಲು ಮೋರಿ ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದಿದ್ದಾರೆ. ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನು ಪಕ್ಕದ ಮನೆಯ ಸೋಮೇಶ್ವರ ಗ್ರಾ.ಪಂ ಮಾಜಿ ಸದಸ್ಯ ಪ್ರೇಮಾನಂದ ಮತ್ತು ಅವರ ಸಂಬಂಧಿ ಧನರಾಜ್ ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸುವಾಗಲೇ ಸುರೇಶ್ ಮೃತಪಟ್ಟಿದ್ದಾರೆ.
ನದಿ ನೀರಿನ ಮಟ್ಟ ಏರಿಕೆ:ಉತ್ತಮ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜೀವನದಿ ನೇತ್ರಾವತಿಯ ನೀರಿನ ಮಟ್ಟ ತುಸು ಏರಿಕೆಯಾಗಿದೆ. ಬಂಟ್ವಾಳದಲ್ಲಿ 8.5 ಮೀ. ಅಪಾಯದ ಮಟ್ಟ ಇರುವ ನೇತ್ರಾವತಿಯಲ್ಲಿ ಇಂದು ಬೆಳಗ್ಗೆ 3.6 ಮೀ. ನೀರು ಇದೆ. ಉಪ್ಪಿನಂಗಡಿಯಲ್ಲಿ ಅಪಾಯದ ಮಟ್ಟದ 31.5 ಮೀ. ಇರುವಲ್ಲಿ 23.4 ಮೀ ಎತ್ತರಕ್ಕೆ ನೀರು ಹರಿಯುತ್ತಿದೆ. ಫಲ್ಗುಣಿಯಲ್ಲೂ ನೀರಿನ ಹರಿವಿನ ಮಟ್ಟ ಏರಿಕೆಯಾಗಿದೆ.