ಮಂಗಳೂರು:ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಭಾರಿ ಮಳೆಯಿಂದ ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ವರುಣನ ಆರ್ಭಟ ಮುಂದುವರಿದ ಹಿನ್ನೆಲೆಯಲ್ಲಿ ನಾಳೆ (ಜುಲೈ 1) ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ನಗರದ ಪೊಲೀಸ್ ಕ್ವಾರ್ಟರ್ ಸಮೀಪದ ದೈವತ್ ಎಂಬವರ ಮಗ ಸುನಿಲ್ (46) ತೋಡಿಗೆ ಬಿದ್ದು ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮೂಲ್ಕಿಯ ಕೊಲ್ನಾಡು ಕೆ.ಎಸ್. ರಾವ್ ನಗರದಲ್ಲಿ ಘಟನೆ ನಡೆದಿದೆ. ಘಟನೆ ನಿನ್ನೆ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ದಾರಿಹೋಕರು ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಮೂಲ್ಕಿ ಪೊಲೀಸರು ಸ್ಥಳ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾಲಾ ಕಾಲೇಜಿಗೆ ರಜೆ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಅಂಗನವಾಡಿ ಕೇಂದ್ರ, ಶಾಲೆ, ಪಿಯುಸಿ ಮತ್ತು ಪದವಿ ತರಗತಿಗಳಿಗೆ ರಜೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ರಜೆ ಘೋಷಿಸಲಾಗಿದೆ.