ಮಂಗಳೂರು:ಕೇರಳ ರಾಜ್ಯ ಸೇರಿದಂತೆ ವಿವಿಧೆಡೆಗೆ ಅಕ್ರಮವಾಗಿ ಮರಳು ಸಾಗಾಟದ ವಿರುದ್ದ ದಕ್ಷಿಣ ಉಪವಿಭಾಗ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ 8 ಪ್ರಕರಣವನ್ನ ದಾಖಲಿಸಿದ್ದಾರೆ.
ನ. 21 ರಂದು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಉಪನಿರೀಕ್ಷಕಿ ಜಾನಕಿ ಕೆ. ಅವರು ಸಿಬ್ಬಂದಿಯೊಂದಿಗೆ ಆಡಂಕುದ್ರು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಟಿಪ್ಪರ್ ಲಾರಿಯೊಂದನ್ನು ತಡೆದರು. ಆಗ ಚಾಲಕ ಲಾರಿ ನಿಲ್ಲಿಸಿ ಪರಾರಿಯಾಗಿದ್ದಾನೆ. ಅದನ್ನು ಪರಿಶೀಲನೆ ನಡೆಸಿದಾಗ ಪರವಾನಿಗೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಮರಳು ಪತ್ತೆಯಾಗಿದೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ವೌಲ್ಯ 6.06ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ನ.19ರಂದು ಬೆಳಗ್ಗೆ 7ಗಂಟೆಗೆ ಸಿಸಿಬಿ ಘಟಕದ ಸಹಾಯಕ ಪೊಲೀಸ್ ಉಪನಿರೀಕ್ಷಕ ಹರೀಶ್ ಅವರು ಇಲಾಖಾ ಜೀಪಿನಲ್ಲಿ ಗಸ್ತು ತಿರುಗುತ್ತಿದ್ದಾಗ ಬಜಾಲ್ ನೇತ್ರಾವತಿ ನದಿ ತಟದಲ್ಲಿ ಕಲಂದರ್ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಂಗ್ರಹ ಮಾಡಿದ ಮರಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದಾರೆ. ಇದರ ಮೌಲ್ಯ 49 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಅಕ್ರಮ ಮರಳು ಸಾಗಾಟದ ವಿರುದ್ಧ ಭಾರಿ ಕಾರ್ಯಾಚರಣೆ ನ.23 ರಂದುಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾ ನಿರೀಕ್ಷಕ ಗೋಪಿಕೃಷ್ಣ ಮತ್ತು ಸಿಬ್ಬಂದಿ ಚೇತನ್ ಅವರು ವಾಹನ ತಪಾಸಣೆ ಮಾಡುತ್ತಿದ್ದಾಗ ಚೆಂಬುಗುಡ್ಡೆ ಬಳಿ ಟಿಪ್ಪರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 5.04ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ನ.21ರಂದು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಗಸ್ತಿನಲ್ಲಿದ್ದಾಗ ಅರ್ಕುಳ ಜಂಕ್ಷನ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ, ಅರ್ಕುಳದ ಮರಳು ಧಕ್ಕೆಯ ಕಡೆಯಿಂದ ಟಿಪ್ಪರ್ ಹಾಗೂ ಲಾರಿ ಪರಿಶೀಲಿಸಿದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸುಮಾರು 15ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಡಿ ಪೊಲೀಸರು ದಾಳಿ ನಡೆಸಿ ಟಿಪ್ಪರ್ ಲಾರಿ ವಶಪಡಿಸಿಕೊಂಡಿದ್ದಾರೆ.
ನ.11ರಂದು ನೆತ್ತಿಲಪದವು ಬಳಿ ಅಡ್ಕಾರ್‌ನಿಂದ ಮರಳನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ತಡೆದು ನಿಲ್ಲಿಸಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು 13.20ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.