ಮಂಗಳೂರು: ಕೋವಿಡ್ ಬಂದಾಗಿನಿಂದಲೂ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಪಾಡುವಿಕೆ ಜತೆಗೆ ಸ್ಯಾನಿಟೈಸರ್ ಬಳಸುವುದು ಖಡ್ಡಾಯವಾಗಿದೆ. ಎಲ್ಲರ ಆರೋಗ್ಯದ ದೃಷ್ಟಿಯಿಂದ ಇದು ಬಹಳಾನೇ ಅಗತ್ಯವಾಗಿದೆ. ಆದ್ರೆ ಮಾರುಕಟ್ಟೆಯಲ್ಲಿ ಇರುವ ಸ್ಯಾನಿಟೈಸರ್ಗಳ ಕಂಪನಿಗಳು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿವೆಯಾ, ಉತ್ತಮ ಗುಣಮಟ್ಟದ್ದೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಸ್ಯಾನಿಟೈಸರ್ಗಳಿಗೆ ಮಾರುಕಟ್ಟೆಯಲ್ಲಿದೆ ಡಿಮ್ಯಾಂಡ್ ದೇಶಕ್ಕೆ ಕಳೆದ ವರ್ಷ ಕೋವಿಡ್ ಲಗ್ಗೆಯಿಟ್ಟ ಬಳಿಕ ಸ್ಯಾನಿಟೈಸರ್ಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ವೈರಸ್ನಿಂದ ತಪ್ಪಿಸಿಕೊಳ್ಳಲು ಪರಿಣಾಮಕಾರಿಯಾಗಿರುವ ಸ್ಯಾನಿಟೈಸರ್ಗಳಿಗೆ ಬೇಡಿಕೆ ಇರುವುದರಿಂದ ನಾನಾ ಬಗೆಯ ಸ್ಯಾನಿಟೈಸರ್ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಅಗ್ಗದ ಸ್ಯಾನಿಟೈಸರ್ಗೆ ಜಿಲ್ಲೆಯಲ್ಲಿ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ.
ಕೋವಿಡ್ ಮೊದಲನೇ ಅಲೆ ಸಂದರ್ಭದಲ್ಲಿ ಬೇಡಿಕೆಯಷ್ಟು ಸ್ಯಾನಿಟೈಸರ್ಗಳು ಮಾರುಕಟ್ಟೆಯಲ್ಲಿ ಇರಲಿಲ್ಲ. ಎರಡನೇ ಅಲೆಯಲ್ಲಿ ಏಕಾಏಕಿ ಸ್ಯಾನಿಟೈಸರ್ ಉತ್ಪಾದನಾ ಕಾರ್ಯ ಆರಂಭಗೊಂಡು ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕ ಸ್ಯಾನಿಟೈಸರ್ಗಳು ಲಭ್ಯವಿವೆ.
ಸ್ಯಾನಿಟೈಸರ್ಗಳನ್ನು ನಿರ್ದಿಷ್ಟ ಮಾನದಂಡಗಳಂತೆ ತಯಾರು ಮಾಡಬೇಕೆಂಬ ನಿಯಮವಿದೆ. ಮಾರುಕಟ್ಟೆಯಲ್ಲಿ ಜಾಗತಿಕ ಮಟ್ಟದ ಕಂಪನಿಯ ಮತ್ತು ಸ್ಥಳೀಯ ತಯಾರಿಕೆಯ ಸ್ಯಾನಿಟೈಸರ್ಗಳು ಲಭ್ಯವಿದೆ. ಸ್ಥಳೀಯವಾಗಿ ತಯಾರಾದ ಸ್ಯಾನಿಟೈಸರ್ಗಳು ದೊಡ್ಡ ಕಂಪನಿಯ ಸ್ಯಾನಿಟೈಸರ್ಗಳಿಗಿಂತ ಕಡಿಮೆ ದರದಲ್ಲಿ ದೊರೆಯುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸದೆ ತಯಾರಿಸಿದ ಸ್ಯಾನಿಟೈಸರ್ಗಳನ್ನು ಬಳಕೆ ಮಾಡಿದರೆ ಕೈಗಳ ಚರ್ಮಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಚರ್ಮ ವೈದ್ಯ ಡಾ. ಪ್ರಮೋದ್ ಕುಮಾರ್.
ಮಂಗಳೂರಿನಲ್ಲಿ ಅಗ್ಗದ ದರದ ಸ್ಥಳೀಯ ಸ್ಯಾನಿಟೈಸರ್ಗಳು ಲಭ್ಯವಿದ್ದರೂ ಇದರಲ್ಲಿ ಯಾವುದೇ ಸಮಸ್ಯೆಯಾದ ಬಗ್ಗೆ ದೂರುಗಳು ಬಂದಿಲ್ಲ. ಜಿಲ್ಲೆಯಲ್ಲಿ ಯಾವುದೇ ರೀತಿಯ ನಕಲಿ ಸ್ಯಾನಿಟೈಸರ್ ತಯಾರಿಸುತ್ತಿರುವ ಬಗ್ಗೆ ದೂರುಗಳು ದಾಖಲಾಗಿಲ್ಲ.
ಸ್ಯಾನಿಟೈಸರ್ಗಳನ್ನು ಬಳಸುವುದು ಇಂದಿನ ಅನಿವಾರ್ಯತೆಯಾಗಿದ್ದರೂ ಇದನ್ನು ಬಳಸುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕಿದೆ. ಅಗ್ಗದ ದರದಲ್ಲಿ ಸಿಗುವ ಸ್ಯಾನಿಟೈಸರ್ಗಳನ್ನು ಬಳಸುವ ಮುನ್ನ ಅವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ.