ಮಂಗಳೂರು (ದಕ್ಷಿಣ ಕನ್ನಡ):ಹೃದಯ ಕವಾಟು ಬದಲಿಸುವ ಚಿಕಿತ್ಸೆ ಬೈಪಾಸ್ ಸರ್ಜರಿಯ ಮೂಲಕ ನಡೆಯುವುದು ಸಾಮಾನ್ಯ. ಆದರೆ ಮಂಗಳೂರಿನಲ್ಲಿ ಕೀನ್ಯಾ ದೇಶದ ಮಹಿಳಾ ರೋಗಿಗೆ ಬೈಪಾಸ್ ಸರ್ಜರಿ ರಹಿತ ಹೃದಯ ಕವಾಟು ಬದಲಿ ಮಾಡುವ ಅಪರೂಪದ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ.
ಕೀನ್ಯಾ ಮಹಿಳೆಗೆ ಹೃದಯ ಸಂಬಂಧಿ ಕಾಯಿಲೆ:ಕೀನ್ಯಾ ದೇಶದ 65 ವರ್ಷದ ಮಹಿಳೆಯೋರ್ವರು ಮೈಟ್ರಲ್ ವಾಲ್ವ್ ಎಂಬ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2014 ರಲ್ಲಿ ಈ ಮಹಿಳಾ ರೋಗಿ ಅಹಮದಾಬಾದ್ನಲ್ಲಿ ಬೈಪಾಸ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದರು. ಆ ಸಂದರ್ಭದಲ್ಲಿ ಅವರ ಹೃದಯಕ್ಕೆ ಕೃತಕ ಕವಾಟನ್ನು ಅಳವಡಿಸಲಾಗಿತ್ತು. ಈ ಕೃತಕ ಕವಾಟು 8 ವರ್ಷಗಳ ಬಳಿಕ ಕಾರ್ಯ ನಿರ್ವಹಿಸಲು ಅಸಮರ್ಪಕ ಎನಿಸಿದೆ. ಪರಿಣಾಮ, ಮಹಿಳೆಯ ಹೃದಯ ಸಂಬಂಧಿ ಕಾಯಿಲೆ ಮತ್ತಷ್ಟು ಉಲ್ಭಣಗೊಂಡಿತ್ತು. ಇದರಿಂದಾಗಿ ಅವರಿಗೆ ತೀವ್ರ ತರವಾದ ಉಸಿರಾಟದ ಸಮಸ್ಯೆ ಮತ್ತು ತೀವ್ರ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳತೊಡಗಿತು.
ಮಂಗಳೂರಿನ ಇಂಡಿಯಾನ ಆಸ್ಪತ್ರೆ: ಈ ಹಿನ್ನೆಲೆಯಲ್ಲಿ ಅವರು ಮೊದಲು ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ ಅಹಮದಾಬಾದ್ನ ಅದೇ ಆಸ್ಪತ್ರೆಗೆ ಭೇಟಿಯಾದಾಗ, ಅಲ್ಲಿನ ವೈದ್ಯರು ಪುನಃ ಬೈಪಾಸ್ ಸರ್ಜರಿಯನ್ನೇ ಮಾಡಬೇಕು. ಇದರ ಹೊರತು ಬೇರೆ ದಾರಿ ಇಲ್ಲ ಎಂದು ತಿಳಿಸಿದ್ದರು. ಎರಡನೇ ಬಾರಿ ನಡೆಯುವ ಬೈಪಾಸ್ ಸರ್ಜರಿ ಬಹಳ ಅಪಾಯಕಾರಿ. ಅದರಲ್ಲಿ ಬದುಕುಳಿಯುವ ಅವಕಾಶ ತೀರಾ ಕಡಿಮೆ ಇತ್ತು. ಈ ಅಪಾಯಕಾರಿ ಚಿಕಿತ್ಸೆಗೆ ಪರ್ಯಾಯವಾಗಿ ಚಿಕಿತ್ಸೆಯನ್ನು ಶೋಧ ಮಾಡಿದಾಗ ಈ ಹಿಂದೆ ಬೈಪಾಸ್ ಸರ್ಜರಿ ರಹಿತ ಹೃದಯ ಕವಾಟು ಬದಲು ಮಾಡಿದ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಬಗ್ಗೆ ತಿಳಿದು ಆಸ್ಪತ್ರೆಯನ್ನು ಸಂಪರ್ಕಿಸಿದ್ದಾರೆ.
ಮಂಗಳೂರಿನಲ್ಲಿ ಯಶಸ್ವಿ ಚಿಕಿತ್ಸೆ:ಕೀನ್ಯಾ ದೇಶದ ಮಹಿಳೆಯನ್ನು ಪರೀಕ್ಷಿಸಿದ ಇಂಡಿಯಾನ ಆಸ್ಪತ್ರೆಯ ಡಾ. ಯೂಸುಫ್ ಕುಂಬ್ಳೆ ಮತ್ತು ತಂಡ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬೈಪಾಸ್ ಸರ್ಜರಿ ರಹಿತ ಹೃದಯ ಕವಾಟು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗದೇ ಇಂಟರ್ ವೆನ್ಷನಲ್ ಟೆಕ್ನಿಜ್ ಮೂಲಕ (ಹಳೆಯ ಕವಾಟನ್ನು ತೆಗೆಯದೇ ಬೇರೆ ಕವಾಟನ್ನು ಅಳವಡಿಸುವ ಮಧ್ಯಂತರ ಪರ್ಯಾಯ ಚಿಕಿತ್ಸೆ) ಚಿಕಿತ್ಸೆಯನ್ನು ನಡೆಸಿದ್ದಾರೆ.