ಮಂಗಳೂರು :ಕೇರಳದಲ್ಲಿ ಇತ್ತೀಚಿಗೆ ಕರ್ನಾಟಕಕ್ಕಿಂತ ಕಡಿಮೆ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ಗಡಿಭಾಗದವರು ಹೆಚ್ಚಿನ ಆತಂಕ ಪಡಬೇಕಾಗಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವವರ ಆರ್ಟಿಪಿಸಿಆರ್ ನೆಗೆಟಿವ್ ವರದಿ ನೋಡಿ ಬಿಡಲಾಗುತ್ತಿದೆ. ಕೇರಳದಿಂದ ಪ್ರತಿದಿನ ಜಿಲ್ಲೆಗೆ ಜನ ಬರುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೂ ಕೇರಳಕ್ಕೂ ಅವಿನಾಭಾವ ಸಂಬಂಧ ಇದೆ. ಆದರೆ, ಇತ್ತೀಚೆಗೆ ಕೇರಳದಲ್ಲಿ ಕರ್ನಾಟಕಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ವರದಿಯಾಗುತ್ತಿರುವುದರಿಂದ ಜನ ಆತಂಕ ಪಡುವ ಅಗತ್ಯವಿಲ್ಲ. ಆದರೂ, ಬಿಗಿಯಾದ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸುತ್ತೇನೆ ಎಂದರು.
ಕೊರೊನಾ ಕುರಿತಂತೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಪ್ರತಿಕ್ರಿಯೆ.. ಹೆಚ್ಚುವರಿ 3 ಸಾವಿರ ಲಸಿಕಾ ಕೇಂದ್ರ :ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯವಿದೆ. ಈಗಾಗಲೇ 2000 ಲಸಿಕಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಇನ್ನೂ 3000 ಲಸಿಕಾ ಕೇಂದ್ರ ತೆರೆಯಲು ಸಿದ್ಧ ಮಾಡಲಾಗಿದೆ.
ಪ್ರತಿ ಲಸಿಕಾ ಕೇಂದ್ರದಲ್ಲಿ 100 ಮಂದಿ ಲಸಿಕೆ ಹಾಕಿದರೆ, ಪ್ರತಿದಿನ 5 ಲಕ್ಷ ಮಂದಿಗೆ ಲಸಿಕೆ ಹಾಕಿದಂತಾಗುತ್ತದೆ. ಜನ ಲಸಿಕೆ ತೆಗೆದುಕೊಳ್ಳಲು ಮುಂದೆ ಬರಬೇಕು. ಆರೋಗ್ಯ ಕ್ಷೇತ್ರದಲ್ಲಿರುವ ಎಲ್ಲರೂ ಕಡ್ಡಾಯ ಲಸಿಕೆ ತೆಗೆದುಕೊಳ್ಳಬೇಕು ಎಂದರು.
ಓದಿ : ಸಿಎಂ ಸೂಚಿಸಿದ ಮಾರ್ಗಸೂಚಿಯನ್ವಯ ಕೋವಿಡ್ ನಿಯಂತ್ರಣ : ಸಚಿವ ಡಾ.ಸುಧಾಕರ್
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ ಕೇವಲ ಶೇ.40ರಷ್ಟಾಗಿದೆ. ಇನ್ನೂ ಶೇ. 60ರಷ್ಟುಕೊಡಲು ಬಾಕಿಯಿದೆ. ಅದನ್ನು ಕೂಡ ಸಮರೋಪಾದಿ ಕೊಡಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಂಪೌಂಡನ್ನು ಮತ್ತು ಕೈತೋಟವನ್ನು ನರೇಗಾ ಯೋಜನೆಯಡಿ ನಿರ್ಮಿಸಲು ದ.ಕ ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.