ಮಂಗಳೂರು:ಕೊರೊನಾ ನಿಯಂತ್ರಣ ಕಾರ್ಯದಲ್ಲಿ ವೈದ್ಯಕೀಯ ಸಿಬ್ಬಂದಿ ವಿಳಂಬವಿಲ್ಲದೆ ಶೀಘ್ರದಲ್ಲಿ ತಮ್ಮ ತಮ್ಮ ಕಾರ್ಯಗಳನ್ನು ನಿರ್ವಹಿಸಿದಾಗ ಮಾತ್ರ ಸೋಂಕು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನುರಾಜ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್‍ನ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್‍ನಲ್ಲಿ ಕೊರೊನಾ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ದೈನಂದಿನ ಸ್ವ್ಯಾಬ್ ಸಂಗ್ರಹ, ಅವುಗಳ ರವಾನೆ, ಪರೀಕ್ಷೆಯ ಫಲಿತಾಂಶ ನಂತರದಲ್ಲಿ ಸೋಂಕು ದೃಢಪಟ್ಟವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಸ್ವ್ಯಾಬ್ ಸಂಗ್ರಹ ಅವುಗಳ ಪರೀಕ್ಷೆಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಿದಾಗ ಮಾತ್ರ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ತ್ವರಿತಗತಿಯಲ್ಲಿ ಕೈಗೊಳ್ಳಬೇಕು ಎಂದರು.
ಪ್ರತಿದಿನ ಸ್ವ್ಯಾಬ್ ಎಷ್ಟು ಸಂಗ್ರಹವಾಗುತ್ತಿದೆ. ಯಾವ ಯಾವ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಷ್ಟು ಸಂಗ್ರಹವಾಗುತ್ತಿದೆ. ಅವುಗಳ ಪರೀಕ್ಷೆ ಯಾವಾಗ ಆಗುತ್ತಿದೆ ಎಂಬ ಉಸ್ತುವಾರಿ ಕಾರ್ಯದರ್ಶಿಗಳ ಪ್ರಶ್ನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಮರ್ಪಕ ಉತ್ತರ ನೀಡದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಖರ ಮಾಹಿತಿಯನ್ನು ಹೊಂದುವುದರೊಂದಿಗೆ ಹೀಗಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೆಳ ಹಂತದ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರು ನಿರ್ವಹಿಸುತ್ತಿರುವ ಕಾರ್ಯದ ಬಗ್ಗೆ ಮೇಲ್ವಿಚಾರಣೆಯನ್ನು ತಪ್ಪದೇ ಮಾಡಬೇಕು. ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಅವರುಗಳಿಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.