ಸುಳ್ಯ (ದಕ್ಷಿಣ ಕನ್ನಡ) : ಕೋಝಿಕ್ಕೋಡ್ನಲ್ಲಿ ಇಬ್ಬರು ಶಂಕಿತ ನಿಫಾ ವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಕೇರಳದ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಸುಳ್ಯ ಸೇರಿದಂತೆ ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಈಗಾಗಲೇ ನಿಫಾ ವೈರಸ್ ಪತ್ತೆಯಾಗಿ ಇಬ್ಬರು ಮೃತಪಟ್ಟ ಕೇರಳದ ಕೊಝಿಕ್ಕೋಡ್ ಜಿಲ್ಲೆಯ ಮರುದ್ವಾಂಕರ, ಆಯಂಚೇರಿ, ಕಾವಿಲಂಪ್ಪಾರ, ವಿಲ್ಯಾಂಪಳ್ಳಿ, ಕುಟ್ಯಾಡಿ, ಮಂಗಲಾಡ್ ಸೇರಿದಂತೆ ಹಲವಾರು ಪ್ರದೇಶಗಳನ್ನು ಕಂಟೋನ್ಮೆಂಟ್ ಪ್ರದೇಶಗಳಾಗಿ ಘೋಷಣೆ ಮಾಡಲಾಗಿದೆ. ಮಲಪ್ಪುರಂ, ಕಣ್ಣೂರು, ವಯನಾಡ್, ಕಾಸರಗೋಡು ಜಿಲ್ಲೆಗಳಲ್ಲಿ ಮುಂಜಾಗ್ರತಾ ನಿರ್ದೇಶನವನ್ನು ಕೇರಳದ ಆರೋಗ್ಯ ಇಲಾಖೆ ನೀಡಿದೆ.
ಮಾತ್ರವಲ್ಲದೇ, ಕಾಸರಗೋಡಿನ ಬಹುತೇಕ ಪ್ರದೇಶಗಳು ಸುಳ್ಯ, ಜಾಲ್ಸೂರು, ಮಡಿಕೇರಿ ಮಂಜೇಶ್ವರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶಕ್ಕೆ ಹೊಂದಿಕೊಂಡಿವೆ. ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಪ್ರದೇಶದ ಜನರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ಆರೋಗ್ಯ ಸಮಸ್ಯೆ ಸೇರಿದಂತೆ ಇತರೆ ಅಗತ್ಯತೆಗಳಿಗಾಗಿ ಸುಳ್ಯ, ಮಡಿಕೇರಿ, ಮೈಸೂರು, ಮಂಗಳೂರು ಭಾಗಕ್ಕೆ ಹೆಚ್ಚಾಗಿ ಆಗಮಿಸುತ್ತಾರೆ. ನಿಫಾ ವೈರಸ್ ಬಾವಲಿಗಳ ಮೂಲಕ ಹೆಚ್ಚಾಗಿ ಹರಡುತ್ತಿದೆ ಎನ್ನಲಾಗುತ್ತಿರುವುದರಿಂದ ಗಡಿ ಪ್ರದೇಶದಲ್ಲಿ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ. ಬಾವಲಿಗಳು ಕಚ್ಚಿದ ಹಣ್ಣುಹಂಪಲುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ತಿಳಿಸಲಾಗಿದೆ.
ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್, ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವೆಲೆನ್ಸ್ ತಂಡ ಈಗಾಗಲೇ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸುಳ್ಯದ ಎಲ್ಲಾ ಪ್ರಾಥಮಿಕ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದಿಂದ ದಾಖಲಾದ ಜನರ ಮಾಹಿತಿ ಕಲೆ ಹಾಕಿ, ವಿಶೇಷ ಕಾಳಜಿ ಮೂಲಕ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ನಮ್ಮಲ್ಲಿ ಈ ತನಕ ಯಾವುದೇ ಶಂಕಿತ ನಿಫಾ ಪ್ರಕರಣಗಳು ಪತ್ತೆಯಾಗಿಲ್ಲ, ಆಯಾ ಪ್ರದೇಶಗಳಲ್ಲಿ ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಮೂಲಕ ಎಲ್ಲಾ ರೀತಿಯ ಜ್ವರದ ಕುರಿತು ಸರ್ವೆ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ ಎಂದರು.
ಇದನ್ನೂ ಓದಿ :ನಿಫಾ ಸೋಂಕಿಗೆ ಕೇರಳದಲ್ಲಿ ಇಬ್ಬರು ಸಾವು ಶಂಕೆ : ರೋಗದ ಲಕ್ಷಣಗಳೇನು? ತಡೆ ಹೇಗೆ? ಸಂಪೂರ್ಣ ಮಾಹಿತಿ
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಕೇರಳ ಭಾಗದಿಂದ ವಿಶೇಷವಾಗಿ ಜ್ವರದ ಕಾರಣದಿಂದ ಯಾರಾದರೂ ಬಂದು ಚಿಕಿತ್ಸೆ ಪಡೆಯುತ್ತಿದ್ದರೆ ಅವರ ಕುರಿತಂತೆ ನಿಖರವಾದ ಮಾಹಿತಿ ಪಡೆದುಕೊಳ್ಳಿ ಎನ್ನುವ ಸೂಚನೆಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ನೀಡಿದ್ದಾರೆ. ಜ್ವರ, ಕೆಮ್ಮು, ಶೀತದಂತಹ ಲಕ್ಷಣಗಳು ಕಂಡುಬಂದರೆ ಸ್ವತಃ ಚಿಕಿತ್ಸೆ ಪಡೆಯುವ ಬದಲು ಜನರು ಆಯಾ ಪ್ರದೇಶದಲ್ಲಿ ವೈದ್ಯಕೀಯ ತಜ್ಞರ ನೆರವು ಪಡೆದೇ ತಪಾಸಣೆ ಮತ್ತು ಚಿಕಿತ್ಸೆ ಪಡೆದುಕೊಳ್ಳಬೇಕು" ಎಂದು ಅವರು ಹೇಳಿದರು.
ಇನ್ನು, ನಿಫಾ ವೈರಸ್ ಕುರಿತು ವಿಶೇಷ ಸಭೆ ಕರೆಯಲಾಗಿದ್ದು, ಸಂಜೆ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಂದ ಮಾಧ್ಯಮಗೋಷ್ಟಿ ನಡೆಸಿ ಮಾಹಿತಿ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.