ಕರ್ನಾಟಕ

karnataka

ETV Bharat / state

ಶ್ರೀರಾಮ ವಿದ್ಯಾಕೇಂದ್ರ ನೋಡಿದ ಬಳಿಕ ಕಲ್ಲಡ್ಕ ಡಾ.ಪ್ರಭಾಕರ್​ ಭಟ್​ ಮೇಲಿನ ಅಭಿಪ್ರಾಯ ಬದಲು: ಹೆಚ್​ಡಿಕೆ - ಹೊನಲು ಬೆಳಕಿನ ಕ್ರೀಡೋತ್ಸವ ಬಂಟ್ವಾಳ

HD Kumaraswamy statement about Kalladka Prabhakar Bhat: ಬಂಟ್ವಾಳದಲ್ಲಿ ಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಪಾಲ್ಗೊಂಡಿದ್ದ ಹೆಚ್.​ಡಿ.ಕುಮಾರಸ್ವಾಮಿ, ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ತಮ್ಮ ಭಾಷಣದ ಕೊನೆಗೆ 'ಜೈ ಶ್ರೀರಾಮ್' ಎಂದಿದ್ದು, ಗಮನ ಸೆಳೆಯಿತು.

HD Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ

By ETV Bharat Karnataka Team

Published : Dec 10, 2023, 8:40 AM IST

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ರಾತ್ರಿ ನಡೆದ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿದ ಬಳಿಕ ಹೆಚ್​.ಡಿ.ಕುಮಾರಸ್ವಾಮಿ ಮಾತನಾಡಿದರು.

ಬಂಟ್ವಾಳ(ದಕ್ಷಿಣ ಕನ್ನಡ):ಕೆಲವು ತಪ್ಪು ಮಾಹಿತಿಗಳಿಂದಾಗಿ ಈ ಹಿಂದೆ ನಾನು ಕಲ್ಲಡ್ಕ ಪ್ರಭಾಕರ ಭಟ್​​ ಅವರನ್ನು ಟೀಕಿಸಿದ್ದೆ. ಆದರೆ ಈಗ ನನಗೆ ಅವರು ಏನು ಎಂಬುದರ ಅರಿವಾಗಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ರಾತ್ರಿ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಗುರುಕುಲ ಪರಂಪರೆಯನ್ನು ನೆನಪಿಸುವ ಶಿಕ್ಷಣ ರಾಜ್ಯದ ಎಲ್ಲ ಕಡೆಗಳಲ್ಲೂ ಕಾರ್ಯರೂಪಕ್ಕೆ ಬರಬೇಕು. ಸರ್ಕಾರವನ್ನು ಕಣ್ತೆರೆಸುವಂತಹ ಶಿಕ್ಷಣ ಸಂಸ್ಥೆಯನ್ನು ಕಲ್ಲಡ್ಕ ಪ್ರಭಾಕರ ಭಟ್ ನಡೆಸಿಕೊಂಡು ಹೋಗುತ್ತಿದ್ದಾರೆ. ಇಲ್ಲಿನ ಕ್ರೀಡೋತ್ಸವವು ಉತ್ತರಾಧಿ ಮಠದ ಪರಿಸರದಲ್ಲಿ ಕಳೆದ ನನ್ನ ಬಾಲ್ಯದ ಜೀವನವನ್ನು ನೆನಪಿಸುವಂತೆ ಮಾಡಿತು ಎಂದರು.

ಕೆಲವು ಮಾಹಿತಿಗಳಿಂದ ತಪ್ಪು ಅಭಿಪ್ರಾಯ: ಕಲ್ಲಡ್ಕ ಡಾ.ಪ್ರಭಾಕರ​ ಭಟ್ ಬಗ್ಗೆ ನಾನು ಬೇರೆ ಏನೋ ತಿಳಿದುಕೊಂಡಿದ್ದೆ. ಇಲ್ಲಿಗೆ ಬರುವುದಕ್ಕೂ ಮೊದಲು ಅವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಕೆಲವೊಮ್ಮೆ ನನಗೆ ಸಿಗುವ ಮಾಹಿತಿಗಳು ತಪ್ಪು ಅಭಿಪ್ರಾಯಕ್ಕೆ ಕಾರಣವಾಗುತ್ತವೆ. ಸೌಹಾರ್ದತೆಯ ಬದುಕಿಗೆ ಇಲ್ಲಿನ ಮಾದರಿ ಶಿಕ್ಷಣದ ಅಗತ್ಯವಿದೆ ಎಂದು ಹೇಳಿದರು.

ಇಲ್ಲಿಗೆ ಬಾರದೇ ಇದ್ದಿದ್ದರೆ ನನ್ನ ಜೀವನದಲ್ಲಿ ನಷ್ಟವಾಗುತಿತ್ತು. ಈ ಶಾಲೆಯ ಸಂಸ್ಥಾಪಕರಾದ ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡುತ್ತಿರುವ ಕೊಡುಗೆ ಅಪಾರವಾಗಿದೆ. ಬಾಲ್ಯದಲ್ಲಿ ನಾನು ಶ್ರೀರಾಮನ ಭಜನೆ ಮಾಡುತ್ತಿದ್ದ ದಿನಗಳನ್ನು ಕ್ರೀಡೋತ್ಸವ ಮತ್ತೆ ನೆನಪಿಸಿತು. ಬಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದದ ದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ಕೊಡುತ್ತಿರುವ ಹಾಗೂ ಸರಕಾರದ ಕಣ್ತೆರಸುವ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ.ಭಟ್ ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜೈ ಶ್ರೀರಾಮ್ ಎಂದ ಹೆಚ್‌ಡಿಕೆ: ಈ ಹಿಂದೆ ಡಾ.ಭಟ್ ಅವರ ಬಗ್ಗೆ ಮಾಡಿದ್ದ ಟೀಕೆ, ಪ್ರತಿಕ್ರಿಯೆಗಳ ನನ್ನ ಮನಸ್ಥಿತಿ ಇಂದು ಬದಲಾಗಿದೆ. ನನ್ನನ್ನು ದಾರಿ ತಪ್ಪಿಸಿದ ಕಾರ್ಯಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಕುಮಾರಸ್ವಾಮಿ, ಸಂಸ್ಕೃತಿಯನ್ನು ಕಲಿಸುವ ಶಿಕ್ಷಣ ಪ್ರತಿಗ್ರಾಮದ ಶಾಲೆಗಳಲ್ಲಿ ಸಿಗಲು ಈ ಶಿಕ್ಷಣ ಸಂಸ್ಥೆ ಪ್ರೇರಣೆಯಾಗಿದೆ ಎಂದರು. ಜೈ ಶ್ರೀರಾಮ್ ಎನ್ನುತ್ತಾ ಹೆಚ್‌ಡಿಕೆ ಭಾಷಣ ಮುಗಿಸಿದರು.

ಬಳಿಕ ಸೇಡಂ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾಶಿವ ಸ್ವಾಮೀಜಿ ಮಾತನಾಡಿ, ಬದುಕಿನುದ್ದ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಇದಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರಪ್ರೇಮವನ್ನು ಬೆಳಸಲಾಗುತ್ತಿದೆ. ಈ ಕೆಲಸ ಅಭಿನಂದನೀಯ ಎಂದು ತಿಳಿಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್, ವಿಧಾನ ಪರಿಷತ್ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿ, ಎಸ್.ಎಲ್​ ಬೋಜೇಗೌಡ, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಗುರುರಾಜ್ ಗಂಟಿಹೊಳೆ, ಉಮಾನಾಥ ಕೋಟ್ಯಾನ್​, ಭಾಗೀರಥಿ ಮುರುಳ್ಯ, ಯಶ್ಪಾಲ್ ಸುವರ್ಣ, ವೇದವ್ಯಾಸ ಕಾಮತ್ ಹಾಗು ಸುರೇಶ್ ಶೆಟ್ಟಿ ಗುರ್ಮೆ ಮೊದಲಾದವರು ಇದ್ದರು.

ಇದನ್ನೂ ಓದಿ:ಬಿಎಸ್​ವೈ, ದೇವೇಗೌಡರ ಮಕ್ಕಳಂತೆ ಬಂಗಾರಪ್ಪನವರ ಮಕ್ಕಳು ಒಂದಾಗಬೇಕು: ಹಾಲಪ್ಪ ಹರತಾಳ

ABOUT THE AUTHOR

...view details