ಮಂಗಳೂರು: ಶೇ.60ರಷ್ಟು ಯುವಕರಿರುವ ಭಾರತ ದೇಶದಲ್ಲಿ ದುಡಿಯುವ ಸಂಸ್ಕೃತಿ ಕಡಿಮೆಯಾಗಿದೆ. ಯುವಶಕ್ತಿಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಮಾನ್ಯತೆ ಕೊಟ್ಟಾಗ ದೇಶದ ಜತೆ ನಾವೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯ ವಿದ್ಯುನ್ಮಾನ ನಿಗಮದ (ಕಿಯೋನಿಕ್ಸ್) ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.
ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಕಳೆದ 20 ವರ್ಷಗಳ ಹಿಂದೆ ಕಿಯೋನಿಕ್ಸ್ ಸಂಸ್ಥೆ ಹೇಗಿತ್ತು ಎಂಬುದನ್ನು ಮನವರಿಕೆ ಮಾಡಿ ಅದೇ ರೀತಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತೇನೆ. ಈ ನಿಟ್ಟಿನಲ್ಲಿ ನನಗೆ ಕೊಟ್ಟ ಜವಾಬ್ದಾರಿಯನ್ನು ಪಾರದರ್ಶಕವಾಗಿ ಮಾಡುತ್ತೇನೆ ಎಂದರು.
ಯಾವುದೇ ರಾಜಕೀಯ ಪಕ್ಷವಾಗಲಿ ಜನರಿಗೆ ಸವಲತ್ತುಗಳನ್ನು ಧರ್ಮಾರ್ಥ ನೀಡಿ ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದು ದೇಶಕ್ಕೆ ಅಪಾಯ. ಭಿಕ್ಷೆಯಿಂದಲೇ ದೇಶಕಟ್ಟಲು ಸಾಧ್ಯವಿಲ್ಲ. ಬದಲಾಗಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದರಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಕಿಯೋನಿಕ್ಸ್ ಸಂಸ್ಥೆ ಜನರಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯ ಎಂದ ಅವರು, ಈ ಹಿಂದೆ ರಾಜಕಾರಣಿಗಳು ಮೀನು ತಿನ್ನಿಸುವುದನ್ನು ಮಾತ್ರ ಮಾಡುತ್ತಿದ್ದರು. ಇದರ ಹೊರತಾಗಿ ಪ್ರಸ್ತುತ ಮೀನು ಹಿಡಿದು ತಿನ್ನುವ ಕೆಲಸ ನಾವು ಮಾಡಬೇಕು. ಇತರರಿಗೂ ಈ ರೀತಿಯ ಆಸಕ್ತಿಯನ್ನು ಬೆಳೆಸಬೇಕು ಎಂದರು.
ಕಿಯೋನಿಕ್ಸ್ ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟ ಎಲ್ಲಾ 42 ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಸಂಬಂಧಪಟ್ಟ ಎಂಡಿ ಜೊತೆ ಮಾತನಾಡಿದ್ದೇನೆ. ಯುವಶಕ್ತಿಯ ಕೈಗಳಿಗೆ ಉದ್ಯೋಗ ನೀಡುವ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಆದರೆ, ಉದ್ಯೋಗಸ್ಥರು ಕೇವಲ ಸಂಬಳಕ್ಕಾಗಿ ದುಡಿದ್ರೆ ಯಶಸ್ವಿಯಾಗಲು ಅಸಾಧ್ಯ. ಆದ್ದರಿಂದ ಈ ಕೆಲಸವನ್ನು ನಿಷ್ಠೆಯಿಂದ, ಪ್ರಾಮಾಣಿಕವಾಗಿ ಮಾಡಿದ್ರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಉಪಸ್ಥಿತರಿದ್ದರು.