ಮಂಗಳೂರು:ನಗರದಲ್ಲಿ ಆಯೋಜನೆಗೊಂಡ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ''ಮಂಗಳೂರು ಪ್ರವಾಸ ಅದ್ಭುತವಾಗಿತ್ತು. ಈ ಹಬ್ಬದ ಸಂಭ್ರಮದ ಭಾಗವಾಗಿರುವುದು ಶ್ರೇಷ್ಠವೆನಿಸಿತು" ಎಂದು ಬರೆದುಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಮಿಥುನ್ ರೈ ನೇತೃತ್ವದಲ್ಲಿ ಅಕ್ಟೋಬರ್ 23ರಂದು ಉರ್ವ ಮೈದಾನದಲ್ಲಿ ನಡೆದ ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಹರ್ಭಜನ್ ಸಿಂಗ್ ಭಾಗವಹಿಸಿದ್ದರು.
ಪಿಲಿನಲಿಕೆ ಕಾರ್ಯಕ್ರಮದಲ್ಲಿ ನಟ ಸುನಿಲ್ ಶೆಟ್ಟಿ ಕೂಡ ಪಾಲ್ಗೊಂಡಿದ್ದರು. ಹರ್ಭಜನ್ ಸಿಂಗ್ ಆಗಮಿಸುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಜನರು ಕರತಾಡನದೊಂದಿಗೆ ಮೊಬೈಲ್ ಲೈಟ್ ಆನ್ ಮಾಡಿ ಕ್ರಿಕೆಟಿಗನ ಮೇಲಿರುವ ಪ್ರೀತಿ ವ್ಯಕ್ತಪಡಿಸಿದ್ದರು. ಇದೇ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಹರ್ಭಜನ್ ಸಿಂಗ್, ಇಲ್ಲಿನ ಆಹಾರವನ್ನು ಮೆಚ್ಚಿಕೊಂಡಿದ್ದಾರೆ.