ಮಂಗಳೂರು: ಭಾರತದಲ್ಲಿ ಫುಟ್ಬಾಲ್ ಕ್ರೀಡೆಗೆ ಕ್ರಿಕೆಟ್ನಷ್ಟು ಮಹತ್ವವಿಲ್ಲ. ಕ್ರಿಕೆಟ್ ಆಟದಲ್ಲಿ ಮಾಡುವ ಸಾಧನೆಗಳು ಭಾರೀ ಸದ್ದು ಮಾಡುತ್ತವೆ. ಅದೇ ರೀತಿ ಫುಟ್ಬಾಲ್ನಲ್ಲಿ ಮಂಗಳೂರಿನ ಯುವಕನೊಬ್ಬ ಸಾಧನೆ ಮಾಡಿ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ. ಮಂಗಳೂರಿನ ಯುವಕನೊಬ್ಬ ಇದೇ ಫುಟ್ಬಾಲ್ನಲ್ಲಿ ನಟ್ಮೆಗ್ ಆಟವಾಡುತ್ತಾ ವಿದೇಶಿಯರ ದಾಖಲೆಯನ್ನೇ ಮುರಿದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಸೇರಿ ಎಲ್ಲರನ್ನೂ ಬೆರಗಾಗಿಸಿದ್ದಾರೆ.
ಹೌದು, ಮಂಗಳೂರಿನ ದೇರಳಕಟ್ಟೆ ಬೆಳ್ಮ ನಿವಾಸಿ ಮುಹಮ್ಮದ್ ಶಲೀಲ್ ಈ ಸಾಧನೆ ಮಾಡಿದ ಯುವಕ. ಮಂಗಳೂರಿನ ಯೇನೆಪೋಯ ಕಾಲೇಜಿನಲ್ಲಿ ಏವಿಯೇಷನ್ & ಲಾಜಿಸ್ಟಿಕ್ಸ್ ಅಂತಿಮ ಪದವಿ ವಿದ್ಯಾರ್ಥಿಯಾಗಿರುವ ಈತನಿಗೆ ಫುಟ್ಬಾಲ್ ಕ್ರೀಡೆಯೆಂದರೆ ಅಚ್ಚುಮೆಚ್ಚು. ಗೋಲ್ ನಟ್ನತ್ತ ಗುರಿಯಿಟ್ಟು ಫುಟ್ಬಾಲ್ ಆಡವುದೆಂದರೆ ಖುಷಿ. ತನ್ನ ಹತ್ತನೇ ವಯಸ್ಸಿನಲ್ಲಿಯೇ ಫುಟ್ಬಾಲ್ ಬಗ್ಗೆ ಕ್ರೇಜ್ ಬೆಳೆಸಿಕೊಂಡಿದ್ದ ಶಲೀಲ್ ಇದೀಗ ಅದೇ ಆಟದಲ್ಲಿ ಸಾಧನೆ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಟದಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.
ಶಲೀಲ್ ಕೇವಲ 30 ಸೆಕೆಂಡುಗಳಲ್ಲಿ ಫುಟ್ಬಾಲ್ 10 ನಟ್ಮೆಗ್ಗಳನ್ನು ಮಾಡಿ ಜಗತ್ತಿನ ಅತೀ ವೇಗದ ನಟ್ಮೆಗ್ ಅನ್ನು ದಾಖಲೆ ಮಾಡಿದ್ದಾರೆ. ಎದುರಾಳಿ ಆಟಗಾರನ ಕಾಲುಗಳ ಮಧ್ಯದಿಂದ ಚೆಂಡನ್ನು ಕರಾರುವಕ್ಕಾಗಿ ಹೊಡೆಯುವ ಸಾಧನೆಯನ್ನು ಫುಟ್ಬಾಲ್ ಭಾಷೆಯಲ್ಲಿ ನಟ್ಮೆಗ್ ಎಂದು ಕರೆಯಲಾಗುತ್ತದೆ. ಸದ್ಯ ವಿದೇಶಿಯರ ಹೆಸರಿನಲ್ಲಿದ್ದ ಈ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಅನ್ನು ಶಲೀಲ್ ಇದೀಗ ತನ್ನ ಹೆಸರಿನಲ್ಲಿ ದಾಖಲಿಸಿಕೊಂಡಿದ್ದಾನೆ.
ಫುಟ್ಬಾಲ್ನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಗೂಗಲ್ನಲ್ಲಿ ಈ ಬಗ್ಗೆ ನೋಡಿದ್ದ ಶಲೀಲ್ ನಟ್ಮೆಗ್ ದಾಖಲೆಯನ್ನು ತನ್ನದಾಗಿಸಬೇಕೆಂದು ಹಠತೊಟ್ಟಿದ್ದರು. ಮೂರು ತಿಂಗಳ ನಿರಂತರ ಅಭ್ಯಾಸದ ಮೂಲಕ ನಟ್ಮೆಗ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಸಪ್ಟೆಂಬರ್ನಲ್ಲಿ ಗಿನ್ನಿಸ್ ರೆಕಾರ್ಡ್ಗೆ ಆನ್ಲೈನ್ ಅರ್ಜಿ ಹಾಕಿದ್ದ ಶಲೀಲ್, ಬಳಿಕ ವಿಡಿಯೋ ಮಾಡಿ ಸಲ್ಲಿಸಿದ್ದರು. ಇದೀಗ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲಿಸಿರುವ ಅಧಿಕೃತ ಇಮೇಲ್ ಬಂದಿದ್ದು, ಅತೀ ಶೀಘ್ರದಲ್ಲೇ ಗಿನ್ನಿಸ್ ರೆಕಾರ್ಡ್ ಪದಕ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.