ಮಂಗಳೂರು:ಜಿಲ್ಲೆಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ರಚನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಸುಮಾರು 250ಕ್ಕೂ ಅಧಿಕ ಗೂಡು ದೀಪಗಳು ಸ್ಪರ್ಧೆಯಲ್ಲಿ ನೋಡುಗರ ಕಣ್ಮನ ಸೆಳೆದವು.
ಕುದ್ರೋಳಿಯಲ್ಲಿ ಗೂಡು ದೀಪ ಸ್ಪರ್ಧೆ... ಮಂಗಳೂರಿಗರು ಫಿದಾ - 250ಕ್ಕೂ ಅಧಿಕ ಗೂಡುದೀಪಗಳು
ಹಿಂದೆ ದೀಪಾವಳಿಯ ಸಂದರ್ಭದಲ್ಲಿ ಮನೆಯ ಮುಂಭಾಗ ಇರಿಸಲು ಗೂಡು ದೀಪಗಳನ್ನು ಮನೆಯಲ್ಲೇ ಮಾಡಲಾಗುತ್ತಿತ್ತು. ಆದರೆ, ಈ ಆಧುನಿಕ ಯುಗದಲ್ಲಿ ಯಾರೂ ಗೂಡು ದೀಪಗಳನ್ನು ಮಾಡುತ್ತಿಲ್ಲ. ಆದ್ದರಿಂದ ಈ ಕಲೆಯನ್ನು ಇನ್ನೂ ಮುಂದುವರೆಸುತ್ತಿರುವ ಕಲಾವಿದರನ್ನು ಹುಡುಕಲು ಮಂಗಳೂರಿನರಿನಲ್ಲಿ ಗೂಡು ದೀಪ ರಚನೆ ಸ್ಪರ್ಧೆ ನಡೆಸಲಾಯಿತು.

ಸಾಂಪ್ರದಾಯಿಕ ಹಾಗೂ ಆಧುನಿಕ ಎರಡೂ ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಜನರು ಈ ವಿಭಿನ್ನ ಮಾದರಿಯ ಗೂಡು ದೀಪಗಳನ್ನು ಕಂಡು ಫುಲ್ ಫಿದಾ ಆದರು. ಕಲಾವಿದನ ಕಲ್ಪನೆಯ ಮೂಸೆಯಲ್ಲಿ ಅರಳಿದ ಅಡಿಕೆ ಹಾಳೆ, ಬೆಂಕಿ ಕಡ್ಡಿ, ತೆಂಗಿನ ಗರಿ, ಹಗ್ಗ, ಕ್ರೆಯಾನ್ಸ್, ನೂಲಿನ ಹೊಲಿಗೆ, ಬಣ್ಣದ ಕಾಗದ, ಹಿಡಿಸೂಡಿ ಕಡ್ಡಿ, ಯಕ್ಷಗಾನ ಮಾದರಿಯ ಗೂಡು ದೀಪಗಳು ಜನಾಕರ್ಷಣೆಗೆ ಒಳಗಾದವು.
ಇಲ್ಲಿನ ಹೆಚ್ಚಿನ ಗೂಡು ದೀಪಗಳು ಬಹಳ ಕಾಲದ ಪರಿಶ್ರಮದಿಂದ ರಚನೆಗೊಂಡಿವೆ. ಅಡಿಕೆ ಹಾಳೆಯ ಗೂಡು ದೀಪ ಎಂಟು ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡರೆ, ಬೆಂಕಿ ಕಡ್ಡಿಯ ಗೂಡುದೀಪ ಒಂದೂವರೆ ತಿಂಗಳ ಪರಿಶ್ರಮದಿಂದ ನಿರ್ಮಾಣಗೊಂಡಿದೆ. ಯಕ್ಷಗಾನ ಮಾದರಿಯ ಬಣ್ಣ ಕಾಗದದ ಗೂಡು ದೀಪ ನಿರ್ಮಾಣಕ್ಕೆ ಎರಡು ವಾರಗಳ ಪರಿಶ್ರಮ ಇದೆ. ಕಲಾವಿದನ ತಾಳ್ಮೆ, ಪರಿಶ್ರಮದಿಂದ ಮೂಡಿ ಬಂದ ಅನೇಕ ರೀತಿಯ ಗೂಡು ದೀಪಗಳು ಸ್ಪರ್ಧೆಗೆ ಬಂದಿದ್ದವು. ಗೂಡು ದೀಪಗಳನ್ನು ರಚನೆ ಮಾಡಲು ವೇದಿಕೆ ನಿರ್ಮಾಣವಾಗಿರುವುದರಿಂದ ಯಾವ ಅಂಗಡಿ ಮಳಿಗೆಗಳಲ್ಲೂ ದೊರೆಯದ ಹಲವಾರು ಮಾದರಿಯ, ವಿಭಿನ್ನ ಶೈಲಿಯ ಗೂಡು ದೀಪಗಳನ್ನು ನೋಡಿ ಜನ ಸಂತೋಷ ಪಟ್ಟರು.