ಮಂಗಳೂರು :ಗ್ರಾಮ ಪಂಚಾಯತ್ ಚುನಾವಣೆ ಪಕ್ಷರಹಿತವಾಗಿ ನಡೆಯುವ ಚುನಾವಣೆಯಾದ್ರೂ, ಪ್ರಾರಂಭದಲ್ಲಿಯೇ ಮೀಸಲಾತಿ ಪಟ್ಟಿಯಲ್ಲಿ ಸರ್ಕಾರದ ಹಸ್ತಕ್ಷೇಪ ದೊಡ್ಡ ಪ್ರಮಾಣದಲ್ಲಿ ನಡೆದಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಹಿಂದೆ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ನ ಏಳು ಶಾಸಕರಿದ್ದರೂ ಗ್ರಾಪಂ ಚುನಾವಣೆಯ ಮೀಸಲಾತಿ ಪಟ್ಟಿಯಲ್ಲಿ ಪ್ರವೇಶ ಮಾಡಿಲ್ಲ. ಆದರೆ, ಇದೀಗ ಬಿಜೆಪಿ ಶಾಸಕರು ಮೀಸಲಾತಿ ಪಟ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 1992ರಂದು ಅಂದಿನ ಕಾಂಗ್ರೆಸ್ ಸರ್ಕಾರ ಗ್ರಾಪಂ ವಿಕೇಂದ್ರೀಕರಣ ಮಾಡಿ ನೇರವಾಗಿ ಜಿಪಂ ಮೂಲಕ ಹಣವನ್ನು ಒದಗಿಸಿ ಗ್ರಾಮದ ಅಭಿವೃದ್ಧಿ ಮಾಡುವ ಆಶೋತ್ತರ ಹೊಂದಿತ್ತು.
ಅಂದು ಬಿಜೆಪಿಯವರು ಅದನ್ನೂ ವಿರೋಧಿಸಿದ್ದರು. ಆದರೆ, ಕಾಂಗ್ರೆಸ್ ಅದನ್ನು ಅನುಷ್ಠಾನಗೊಳಿಸಿದ ಪರಿಣಾಮ ಕೋಟ್ಯಂತರ ರೂ. ಹಣ ಜಿಪಂಗೆ ಬರುವಂತಾಯಿತು. ಈ ಮೂಲಕ ಇಂದು ಅನೇಕ ಕಾರ್ಯಕ್ರಮಗಳು ನಡೆದು ಗ್ರಾಪಂ ಅಭಿವೃದ್ಧಿ ಹೊಂದುವಂತಾಯಿತು ಎಂದರು. ಇದೀಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅನೇಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.
ಮಾಸಾಶನ ದೊರಕುತ್ತಿಲ್ಲ, ಹೊಸ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ, ಬಿಪಿಎಲ್ ಕಾರ್ಡ್ದಾರರ ಕಾರ್ಡ್ ರದ್ದುಗೊಳಿಸಿ, ದಂಡ ಹಾಕಲಾಗುತ್ತಿದೆ. ಗ್ಯಾಸ್ ಸಬ್ಸಿಡಿ ದೊರಕುತ್ತಿಲ್ಲ. ವಿದ್ಯುತ್ ದರ ಹೆಚ್ಚಳವಾಗಿದೆ. ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಐದು ಲಕ್ಷ ರೂ. ಪರಿಹಾರ ಯಾರಿಗೂ ದೊರಕಿಲ್ಲ. ಕಚ್ಚಾತೈಲದ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೊರೊನಾ ಬಂದ ಬಳಿಕ ದೇಶದ ಶೇ.27ರಷ್ಟು ಜನರು ಪೌಷ್ಟಿಕಾಹಾರದ ಕೊರತೆಯಿಂದ ಬಳಲುತ್ತಿದ್ದಾರೆ.