ಬಂಟ್ವಾಳ: ಬಂಟ್ವಾಳ ಬ್ಲಾಕ್ ಹಾಗೂ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗ್ರಾಮ ಪಂಚಾಯತ್ ಚುನಾವಣೆಯ ಪೂರ್ವ ಸಿದ್ಧತಾ ಸಭೆ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾ.ಪಂ ಚುನಾವಣೆ: ಪಕ್ಷ ಬಲವರ್ಧನೆಗೆ ಕಾಂಗ್ರೆಸ್ ಸಿದ್ಧತಾ ಸಭೆ - ಪಾಣೆ ಮಂಗಳೂರು ಬ್ಲಾಕ್
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಕಳೆದ ಕೆಲ ತಿಂಗಳಿಂದ ಸಿದ್ಧತಾ ಸಭೆಗಳನ್ನು ನಡೆಸುತ್ತಿದ್ದು, ಇಂದು ಬಂಟ್ವಾಳ ಮತ್ತು ಪಾಣೆ ಮಂಗಳೂರು ಕಾಂಗ್ರೆಸ್ ಬ್ಲಾಕ್ ವತಿಯಿಂದ ಸಹ ಸಭೆ ನಡೆಸಲಾಯಿತು.
ಪಂಚಾಯತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಸೂಕ್ಷ್ಮತೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ರೈ ಸಲಹೆ ನೀಡಿದರು. ಜೊತೆಗೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಕೈಗೊಂಡ ಜನಪರ ಯೋಜನೆಗಳು, ಈಗಿನ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನರಿಗೆ ಮನದಟ್ಟು ಮಾಡಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಉಸ್ತುವಾರಿಗಳಾದ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಂಜುಳಾ ಮಾವೆ, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ ಶೆಟ್ಟಿ, ಮಹಿಳಾ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಬಂಟ್ವಾಳ ಪುರಸಭಾ ಸದಸ್ಯರು, ಗ್ರಾಮ ಪಂಚಾಯತ್ ಚುನಾವಣೆಯ ಉಸ್ತುವಾರಿಗಳು, ವಲಯ ಕಾಂಗ್ರೆಸ್ ಅಧ್ಯಕ್ಷರುಗಳು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರು ಉಪಸ್ಥಿತರಿದ್ದರು.