ಬಂಟ್ವಾಳ: ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಅವರು ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ಮಂಗಳವಾರ ತಮ್ಮ ವ್ಯಾಪ್ತಿಗೆ ಬರುವ ಬಂಟ್ವಾಳ ತಾಲೂಕಿನ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದರು.
ಗ್ರಾ.ಪಂ.ಗಳಲ್ಲಿ ಬಾಕಿ ಉಳಿದಿರುವ 94ಸಿ ಹಕ್ಕುಪತ್ರ ವಿತರಣೆ, ಪರಿಹಾರ ಧನ ವಿತರಣೆಯ ಕುರಿತು ತಹಶೀಲ್ದಾರ್ ಅವರಿಂದ ಮಾಹಿತಿ ಪಡೆದು ಅ.12ರಂದು ಬಂಟ್ವಾಳ ತಾ.ಪಂ.ಸಭಾಂಗಣದಲ್ಲಿ ವಿತರಣಾ ಕಾರ್ಯಕ್ರಮ ಹಾಗೂ ಅಧಿಕಾರಿಗಳ ಸಭೆ ನಡೆಸುವುದಾಗಿ ಖಾದರ್ ತಿಳಿಸಿದರು.
ಸಜೀಪಪಡು, ಪಜೀರು ಹಾಗೂ ಕುರ್ನಾಡು ಗ್ರಾ.ಪಂ.ಗಳಿಗೆ ಒಬ್ಬರೇ ಆಡಳಿತಾಧಿಕಾರಿ ಇದ್ದು, ಅಲ್ಲಿನ ಡೋಂಗಲ್ ಗೊಂದಲದ ಕುರಿತು ಶಾಸಕರ ಗಮನಕ್ಕೆ ತರಲಾಯಿತು. ಈ ಕುರಿತು ಜಿ.ಪಂ.ನ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ಗ್ರಾ.ಪಂ.ಗಳ 20 ಮನೆಗಳನ್ನು ಯಾವ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪಿಡಿಒಗಳನ್ನು ಪ್ರಶ್ನಿಸಿದ ಶಾಸಕರು, ನಿಮ್ಮ ಮೇಲಿನ ವಿಶ್ವಾಸದಿಂದ ಸಹಿ ಹಾಕುವುದಾಗಿ ತಿಳಿಸಿದರು. 15ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆಯ ಗೊಂದಲಗಳ ಕುರಿತು ಪಿಡಿಒಗಳು ತಿಳಿಸಿದರು. ಪ್ರಾರಂಭದಲ್ಲಿ ಬಂದ ಸೂಚನೆಯಲ್ಲಿ ಅಂಗವಿಕಲರಿಗೆ ಶೇ. 5 ರಷ್ಟು ಅನುದಾನ ಮೀಸಲಿಡುವ ವಿಚಾರವಿರಲಿಲ್ಲ. ಪ್ರಸ್ತುತ ಕೆಲಸಗಳನ್ನು ಅಪ್ಲೋಡ್ ಮಾಡಿದ ಬಳಿಕ 5 ಶೇ. ಮೀಸಲಿಡಲು ತಿಳಿಸಲಾಗಿದೆ. ಆದರೆ ಅಲ್ಲಿ ಕೆಲಸ ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಭಿವೃದ್ಧಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು.
ಸಭೆಯಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾ.ಪಂ.ಇಒ ರಾಜಣ್ಣ, ತಹಶೀಲ್ದಾರ್ ರಶ್ಮಿ ಎಸ್.ಆರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.