ಮಂಗಳೂರು: ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ 7 ಕೆಜಿ ಅಕ್ಕಿ ನೀಡುತ್ತಿತ್ತು. ಆದರೆ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಊಟಕ್ಕಿಲ್ಲದ ಪರಿಸ್ಥಿತಿಯಲ್ಲಿ ಎರಡು ಕೆಜಿ ಅಕ್ಕಿಯನ್ನು ಕಡಿತಗೊಳಿಸಿ 5 ಕೆಜಿ ನೀಡುತ್ತಿದೆ. ಎರಡು ತಿಂಗಳಿಗೆ 10 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಆದ್ದರಿಂದ ಕೂಡಲೇ ಉಳಿದ 4 ಕೆಜಿ ಅಕ್ಕಿಯನ್ನು ಕೊಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಪಡಿತರದಲ್ಲಿ ಕಡಿತಗೊಳಿಸಿರುವ 2 ಕೆಜಿ ಅಕ್ಕಿಯನ್ನು ಸರ್ಕಾರ ನೀಡಲಿ: ಶಾಸಕ ಹರೀಶ್ ಕುಮಾರ್ - MLA Harish Kumar Latest News
ಲಾಕ್ಡೌನ್ ಹಿನ್ನೆಲೆ ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಊಟಕ್ಕಿಲ್ಲದ ಪರಿಸ್ಥಿತಿಯಲ್ಲಿ ಸರ್ಕಾರ ಪಡಿತರ 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ ಕೇವಲ 5 ಕೆಜಿ ಅಕ್ಕಿ ನೀಡುತ್ತಿದೆ. ಇದರಿಂದಾಗಿ ಜನರು ಜೀವನ ನಡೆಸಲು ಕಷ್ಟವಾಗಿದ್ದು, ಕಡಿತಗೊಳಿಸಿದ ಅಕ್ಕಿಯನ್ನು ಸರ್ಕಾರ ಕೂಡಲೇ ನೀಡಬೇಕು ಎಂದು ಶಾಸಕ ಹರೀಶ್ ಕುಮಾರ್ ಆಗ್ರಹಿಸಿದರು.
![ಪಡಿತರದಲ್ಲಿ ಕಡಿತಗೊಳಿಸಿರುವ 2 ಕೆಜಿ ಅಕ್ಕಿಯನ್ನು ಸರ್ಕಾರ ನೀಡಲಿ: ಶಾಸಕ ಹರೀಶ್ ಕುಮಾರ್ Govt to give 2.KG rice cut in ration: MLA Harish Kumar](https://etvbharatimages.akamaized.net/etvbharat/prod-images/768-512-6661924-1072-6661924-1586004513517.jpg)
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ದ.ಕ ಜಿಲ್ಲೆಯಲ್ಲಿ ಕುಚೆಲಕ್ಕಿಗೆ ಬೇಡಿಕೆ ಇದೆ. ಕನಿಷ್ಠ ಒಂದು ತಿಂಗಳಿಗಾದರೂ ಕುಚೆಲಕ್ಕಿ ನೀಡಲಿ. ಗೋಧಿ ಕೊಡಲಾಗುತ್ತದೆ ಎಂದು ಘೋಷಣೆ ಮಾಡಿದರೂ ಈವರೆಗೆ ಗೋಧಿ ಕೊಡಲಿಲ್ಲ. ಅಲ್ಲದೆ ಒಂದು ತಿಂಗಳ ಮಟ್ಟಿಗಾದರೂ ದಿನಸಿ ಸಾಮಾಗ್ರಿಗಳನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಬೇಕೆಂದು ನಾವು ವಿನಂತಿಸುತ್ತಿದ್ದೇವೆ ಎಂದರು.
ಪಕ್ಕದ ಕೇರಳದಲ್ಲಿ ಇಂತಹ ವಿಕೋಪದ ಸಂದರ್ಭದಲ್ಲಿ 20 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ. ಆದರೆ ನಮ್ಮಲ್ಲಿ ಕೇವಲ 200 ಕೋಟಿ ರೂ. ಪ್ಯಾಕೇಜ್ ನೀಡಿದ್ದು, ಇದು ಎಲ್ಲಿಗೂ ಸಾಕಾಗುವುದಿಲ್ಲ. ನಮಗೆ ಮಾಸ್ಕ್ ಹಾಗೂ ವೆಂಟಿಲೇಟರ್ಗೂ ಸರಿಯಾದ ವ್ಯವಸ್ಥೆ ಇಲ್ಲ. ರೋಗ ಉಲ್ಬಣಗೊಂಡಲ್ಲಿ ನಮ್ಮ ರಾಜ್ಯದಲ್ಲಿರುವ 700 ವೆಂಟಿಲೇಟರ್ ಎಲ್ಲಿಗೂ ಸಾಕಾಗುವುದಿಲ್ಲ. ಅಧಿವೇಶನ ಆರಂಭವಾದಂದಿನಿಂದ ವೆಂಟಿಲೇಟರ್ ತರಿಸುತ್ತೇವೆ ಎಂದು ರಾಜ್ಯ ಸರಕಾರ ಹೇಳುತ್ತಾ ಬಂದಿದೆ. ಆದರೆ ಈವರೆಗೆ ಒಂದು ವೆಂಟಿಲೇಟರ್ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರಧಾನಿ ಚಪ್ಪಾಳೆ ತಟ್ಟಲು ಹೇಳಿದರು ತಟ್ಟಿದೆವು. ನಾಳೆ ಮೊಂಬತ್ತಿ ಬೆಳಗಲು ಹೇಳಿದ್ದಾರೆ, ಬೆಳಗುತ್ತೇವೆ. ಅದರೊಂದಿಗೆ ಜನರ ಹಸಿವು ನೀಗಿಸಲು ಪ್ರಧಾನಿ ವ್ಯವಸ್ಥೆ ಮಾಡಬೇಕಾಗಿದೆ. ನೀವು ಮನೆಗೆ ಎರಡು ತಿಂಗಳ ದಿನಸಿ ಸಾಮಾಗ್ರಿ ನೀಡಿದ್ದಲ್ಲಿ ಖಂಡಿತವಾಗಿ ಯಾರೂ ಮನೆಯಿಂದ ಹೊರ ಬರುವುದಿಲ್ಲ. ಕಾಂಗ್ರೆಸ್ ಇಂದಿನ ಎಲ್ಲಾ ಸಮಸ್ಯೆಗಳಿಗೂ ಸ್ಪಂದನೆ ನೀಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ನಾವು ರಾಜಕೀಯ ಮಾಡೋದಿಲ್ಲ ಎಂದರು.