ಮಂಗಳೂರು:ಸರ್ಕಾರ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಿದರೂ ಕಲಿಕೆಗೆ ಪಠ್ಯಕ್ರಮವನ್ನು ಇನ್ನೂ ನಿರ್ಧರಿಸದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಗಳನ್ನು ಆರಂಭಿಸಿದರೂ ಸರ್ಕಾರ ಇನ್ನೂ ಪಠ್ಯಕ್ರಮವನ್ನು ನಿಗದಿಪಡಿಸಿಲ್ಲ. ನಾವು ಕಳೆದ 6 ತಿಂಗಳಿನಿಂದ ಶಾಲಾ ಪ್ರಾರಂಭಕ್ಕೆ ಮುನ್ನ ಪಠ್ಯಕ್ರಮ ನಿರ್ಧಾರ ಮಾಡಿ ಎಂದು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ ಈಗ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸಿದರೂ ಪಠ್ಯಕ್ರಮ ನಿಗದಿಪಡಿಸಿಲ್ಲ. ಈ ಮೂಲಕ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಮತ್ತು ಪೋಷಕರಲ್ಲಿ ಒತ್ತಡ ತರುವ ಮೂಲಕ ಚೆಲ್ಲಾಟವಾಡುತ್ತಿದೆ ಎಂದು ಆಪಾದಿಸಿದರು.