ಮಂಗಳೂರು :ರಾಜ್ಯದಲ್ಲಿ ಬಿಜೆಪಿಯವರುಮುಖ್ಯಮಂತ್ರಿ ಸ್ಥಾನವನ್ನು ಹರಾಜಿಗಿಟ್ಟಿದ್ದಾರೆ. ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದಲೇ ಇದು ಸಾಬೀತಾಗಿದೆ. ಈ ಮೂಲಕ ಬಿಜೆಪಿಯವರು ಕನ್ನಡಿಗರಿಗೆ ಅವಮಾನ ಮಾಡಿದ್ಧಾರೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಯತ್ನಾಳ್ ಸಿಎಂ ಸ್ಥಾನದ ಬೆಲೆ ಪ್ರಕಟಿಸಿದ್ದಾರೆ. ಪಿಎಸ್ಐ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲರಿಗೂ ಗೊತ್ತಿರುವ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ನೋಟಿಸ್ ನೀಡಿ ಬಿಜೆಪಿ ಸರ್ಕಾರ ವಿಚಾರಣೆಗೆ ಕರೆದಿದೆ. ಈಗ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆಯೂ ಸರ್ಕಾರ ತನಿಖೆ ನಡೆಸುತ್ತದೆಯೇ?. ಈ ವಿಚಾರದಲ್ಲಿ ಬಿಜೆಪಿಯ ನಿಲುವೇನು ಎಂಬುದು ಜನತೆಗೆ ತಿಳಿಸಬೇಕೆಂದು ಆಗ್ರಹಿಸಿದರು.
ಶಾಸಕ ಯತ್ನಾಳ್‌ರ ಸಿಎಂ ಫಾರ್ ಸೇಲ್ ಹೇಳಿಕೆ ಕುರಿತಂತೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿರುವುದು.. ಎಂಡಿಎಫ್ ವಿರುದ್ಧ ಕ್ರಮಕೈಗೊಳ್ಳಿ :ಸಾಮಾಜಿಕ ಜಾಲತಾಣದ ಮೂಲಕ ಸಮಾಜದಲ್ಲಿ ಗೊಂದಲ, ವೈಮನಸ್ಸು ಸೃಷ್ಟಿ ಮಾಡಲಾಗುತ್ತಿದೆ. ಈ ರೀತಿಯ ಮಾಡುವವರ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಸರ್ಕಾರ ಇದರ ಬಗ್ಗೆ ಕಠಿಣ ಕ್ರಮಕೈಗೊಳ್ಳಲಿ ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಮುಸ್ಲಿಂ ಡಿಫೆನ್ಸ್ ಫೋರ್ಸ್ನಿಂದ ಶಾಂತಿ ಕದಡುವ ಕೃತ್ಯವಾಗಿದೆ. ಈ ರೀತಿಯ ಕೃತ್ಯ ಮಾಡಿದರೆ ಕಠಿಣ ಕ್ರಮಕೈಗೊಳ್ಳಿ. ಯಾರು ಇದರ ಹಿಂದೆ ಇದ್ದಾರೆ, ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ. ಯಾವುದೇ ಅಡ್ರೆಸ್ ಇಲ್ಲದೆ, ಯಾವುದೇ ವಿಚಾರ ಇಲ್ಲದೆ ಈ ಕೃತ್ಯ ಮಾಡುತ್ತಿದ್ದಾರೆ. ಈ ಕೃತ್ಯಗಳಿಗೆ ಸರ್ಕಾರ ಕಡಿವಾಣ ಹಾಕಬೇಕಿದೆ. ಈ ಕೃತ್ಯಗಳ ನಿರ್ಲಕ್ಷ್ಯವು ಸಮಾಜಕ್ಕೆ ಮಾಡುವ ದ್ರೋಹ ಎಂದು ಹೇಳಿದರು.
ಇದನ್ನೂ ಓದಿ:ಯತ್ನಾಳ್ಗೆ ಯಾರು ಒತ್ತಡ ಹಾಕಿದ್ದರು, ಹಣ ಕೇಳಿದ್ದರು ಎಂದು ಅವರೇ ಹೇಳಬೇಕು: ಬಿ.ವೈ.ವಿಜಯೇಂದ್ರ