ಮಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ಸೋಂಕಿತರ ಆಸ್ಪತ್ರೆ ಬಿಲ್ ಸಂಪೂರ್ಣ ಸರ್ಕಾರವೇ ಭರಿಸಲಿ. ಹಾಗೆಯೇ ರಾಜ್ಯಾದ್ಯಂತ ಆಕ್ಸಿಜನ್ ಸೌಲಭ್ಯವುಳ್ಳ ಒಂದು ಲಕ್ಷ ಬೆಡ್ಗಳನ್ನು ವ್ಯವಸ್ಥೆ ಮಾಡಲಿ. ಅಲ್ಲದೇ ದ.ಕ.ಜಿಲ್ಲೆಯಲ್ಲಿ ಕನಿಷ್ಠ 5,000 ಬೆಡ್ಗಳನ್ನಾದರೂ ವ್ಯವಸ್ಥೆ ಮಾಡಿಸಬೇಕೆಂದು ಮಾಜಿ ವಿಧಾನಪರಿಷತ್ ಶಾಸಕ ಐವನ್ ಡಿಸೋಜಾ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಅಕ್ಕಿ ಇಂದಿನಿಂದಲೇ ವಿತರಣೆಯಾಗಲಿ. ಅಲ್ಲದೇ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ನಿಯಮಗಳ ಬಗ್ಗೆ ತಕ್ಷಣವೇ ಜನರಿಗೆ ತಿಳಿಸಲಿ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ. ಕೋವಿಡ್ ಸಾವು ತಡೆಗಟ್ಟಲು ಆಕ್ಸಿಜನ್ ಇಲ್ಲದಿರುವುದೇ ಕಾರಣ. ಇಡೀ ರಾಜ್ಯದಲ್ಲಿ 180 - 250 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣ ಆಕ್ಸಿಜನ್ ಕೊರತೆ ಎಂಬುದನ್ನು ಸರ್ಕಾರ ನೇರವಾಗಿ ಒಪ್ಪಿದೆ. ಆದರೆ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರದಿಂದ ಪಡೆಯಲು ನಮ್ಮ ರಾಜ್ಯದ ಸಂಸತ್ ಸದಸ್ಯರು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಅಲ್ಲದೆ ಸೋಂಕು ನಿಯಂತ್ರಣಕ್ಕೆ ಸರಿಯಾದ ಯೋಜನೆ ಇನ್ನೂ ಸರ್ಕಾರ ಮಾಡಿಕೊಳ್ಳದೇ ಇರುವುದು 2ನೇ ಅಲೆ ಕೋವಿಡ್ ಇಷ್ಟೊಂದು ಪ್ರಬಲವಾಗಿರುವುದಕ್ಕೆ ಕಾರಣ ಎಂದು ಐವನ್ ಡಿಸೋಜಾ ಕಿಡಿಕಾರಿದರು.
ಸರ್ಕಾರ ಅನಗತ್ಯವಾಗಿ ಸಾವಿರಾರು ಕೋಟಿ ರೂ. ಖರ್ಚು ಮಾಡುವ ಬದಲು ಕೋವಿಡ್ ಲಸಿಕೆ ಎಲ್ಲರಿಗೆ ದೊರಕುವಂತೆ ಮಾಡಲು ಖರ್ಚು ಮಾಡಬಹುದು. ಇದೀಗ ರಾಜ್ಯದಲ್ಲಿ ಸೋಂಕಿತರಿಗಾಗಿ ಒಂದು ಲಕ್ಷ ಆಕ್ಸಿಜನ್ ಬೆಡ್ಗಳ ಅವಶ್ಯಕತೆ ಇದೆ. ಬೆಂಗಳೂರಿನಲ್ಲಿ ಆಕ್ಸಿಜನ್ ಬೆಡ್ ಕೊರತೆಯಿರುವುದರಿಂದ ಜನ ಮಂಗಳೂರಿಗೆ ಬರಲು ಆರಂಭಿಸಿದ್ದಾರೆ. ಆದರೆ, ಮಂಗಳೂರಿನಲ್ಲಿ ಕೇವಲ 287 ಆಕ್ಸಿಜನ್ ಬೆಡ್ಗಳಿವೆ, 70 ವೆಂಟಿಲೇಟರ್ಗಳಿವೆ. ನಗರದ ಹೆಚ್ಚಿನ ಆಸ್ಪತ್ರೆಗಳ ಆಕ್ಸಿಜನ್ ಬೆಡ್ಗಳು ಭರ್ತಿ ಆಗಿದೆ. ಆದ್ದರಿಂದ ಕನಿಷ್ಠ 5 ಸಾವಿರ ಬೆಡ್ಗಳು ದಕ್ಷಿಣ ಕನ್ನಡ ಜಿಲ್ಲೆಗೆ ಅವಶ್ಯಕತೆ ಇದ್ದು, ಜಿಲ್ಲೆಯಲ್ಲಿ ಕೇವಲ 3,600 ಬೆಡ್ಗಳಿವೆ. ಆದ್ದರಿಂದ ಹಾಸ್ಟೆಲ್ಗಳು, ಲಾಡ್ಜ್ ಗಳು, ಕಾಲೇಜುಗಳು ಹಾಗೂ ಒಳಾಂಗಣ ಕ್ರೀಡಾಂಗಣವನ್ನು ಒಂದೆರಡು ದಿನಗಳೊಳಗೆ ಆಕ್ಸಿಜನ್ ಬೆಡ್ಗಳಾಗಿ ಪರಿವರ್ತಿಸಿ ಎಂದು ಹೇಳಿದರು.
ಲಸಿಕೆ ಉಚಿತವಾಗಿ ಕೊಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಉಸ್ತುವಾರಿ ಮಂತ್ರಿಗಳು, ಶಾಸಕರುಗಳು ಶಿಲಾನ್ಯಾಸ, ಮದುವೆ ಇದನ್ನೆಲ್ಲಾ ಬಿಟ್ಟು ಕೋವಿಡ್ ಹರಡುವುದನ್ನು ತಡೆಗಟ್ಟಲು ಕೆಲಸ ಮಾಡಲಿ ಎಂದ್ರು.