ಕರ್ನಾಟಕ

karnataka

ETV Bharat / state

ದ.ಕ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣ ಮಾಡಲು ಒತ್ತಾಯ - Mangalore latest News

ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಮಂಗಳೂರು ಮನಪಾ ಕಚೇರಿಯ ಮುಂಭಾಗ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಸಾಮೂಹಿಕ ಧರಣಿ ನಡೆಸಲಾಯಿತು.

ಸಾಮೂಹಿಕ ಧರ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸಾಮೂಹಿಕ ಧರಣಿ ಣಿ
ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ಸಾಮೂಹಿಕ ಧರಣಿ

By

Published : Oct 12, 2020, 2:19 PM IST

Updated : Oct 12, 2020, 2:46 PM IST

ಮಂಗಳೂರು: ದ‌.ಕ ಜಿಲ್ಲೆಯಲ್ಲಿ ಎಂಟು ಮೆಡಿಕಲ್ ಕಾಲೇಜುಗಳಿದ್ದರೂ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ. ಇದು ಈ ಜಿಲ್ಲೆಯ ರಾಜಕಾರಣಕ್ಕೆ ನಾಚಿಕೆಗೇಡಿನ ಸಂಗತಿ. ವೆನ್ಲಾಕ್ ಆಸ್ಪತ್ರೆಯನ್ನಿರಿಸಿ ಒಂದೇ ಒಂದು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ಕೇವಲ ರಾಜಕಾರಣದ ಸೋಲು ಮಾತ್ರವಲ್ಲ, ಈ ಜಿಲ್ಲೆಯ ಜನತೆಯ ಪ್ರಜ್ಞೆಯ ಸೋಲು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣ ಮಾಡಲು ಒತ್ತಾಯ

ಮಂಗಳೂರು ಮನಪಾ ಕಚೇರಿಯ ಮುಂಭಾಗ ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ನಡೆದ ಸಾಮೂಹಿಕ ಧರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರು ಸರಿಯಾಗಿ ಒತ್ತಾಯ ಮಾಡಿಲ್ಲ. ಆದ್ದರಿಂದ ರಾಜಕಾರಣಿಗಳು ಸರಿಯಾಗಿ ಮಾತನಾಡಿಲ್ಲ. ವ್ಯವಸ್ಥೆ ಮಾಡಿಲ್ಲ. ಆದರೆ ವೆನ್ಲಾಕ್ ಆಸ್ಪತ್ರೆಯನ್ನು ಇರಿಸಿ ಖಾಸಗಿ ಮೆಡಿಕಲ್ ಆಸ್ಪತ್ರೆಗಳವರು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟುತ್ತಿದ್ದಾರೆ. ಅದೇ ರೀತಿ ವೆನ್ಲಾಕ್ ಆಸ್ಪತ್ರೆಯನ್ನೂ ನುಂಗಲು ಹೊರಟಿದ್ದಾರೆ‌. ಆದ್ದರಿಂದ ತಕ್ಷಣ ದ.ಕ ಜಿಲ್ಲೆಗೆ ಒಂದಾದರೂ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು‌ ಅವರು ಒತ್ತಾಯಿಸಿದರು.

ವೆನ್ಲಾಕ್ ಜಿಲ್ಲಾಸ್ಪತ್ರೆಯನ್ನು ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಒದಗುವ ರೀತಿಯಲ್ಲಿ ಪೂರ್ಣ ಪ್ರಮಾಣದಲ್ಲಿ‌ ಮೇಲ್ದರ್ಜೆಗೇರಿಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮಾಡಬೇಕು. ನಾಲ್ಕೈದು ಜಿಲ್ಲೆಗಳ ರೋಗಿಗಳು ಈ ಆಸ್ಪತ್ರೆಯನ್ನು ಅವಲಂಬಿಸಿದ್ದು, ನಮ್ಮ ಜನಪ್ರತಿನಿಧಿಗಳು ವೆನ್ಲಾಕ್​ನಲ್ಲಿ ಸಾವಿರ ಬೆಡ್​ಗಳಿವೆ ಎಂದು ಹೇಳುತ್ತಾರೆಯೇ ಹೊರತು ಎಷ್ಟು ವೈದ್ಯರಿದ್ದಾರೆ, ಎಷ್ಟು ಸೌಲಭ್ಯಗಳಿವೆ ಎಂದು ಹೇಳುತ್ತಿಲ್ಲ. ವೆನ್ಲಾಕ್ ಜಿಲ್ಲಾಸ್ಪತ್ರೆ ಬ್ರಿಟಿಷರ ಕಾಲದ ಪದ್ಧತಿಯಲ್ಲಿ ಇದೆಯೇ ಹೊರತು, ಅದನ್ನು ಮೇಲ್ದರ್ಜೆಗೇರಿಸುವ ಕೆಲಸ ಆಗಿಲ್ಲ. ಅಲ್ಲದೆ ಪಬ್ಲಿಕ್ ಪ್ರೈವೇಟ್ ಪಾಲುದಾರಿಕೆ ಹೆಸರಿನಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಬಳಕೆ ಮಾಡಲು ಅವಕಾಶ ಮಾಡಿಕೊಟ್ಟು, ಅಲ್ಲಿನ ಮೆಡಿಕಲ್ ವಿದ್ಯಾರ್ಥಿಗಳಿಗೆ ಕಲಿಕೆ ಮಾಡಲು ಅವಕಾಶ ನೀಡಿ ಸಾಮಾನ್ಯ ರೋಗಿಗಳಾಗಿ ನೋಡುತ್ತಿದ್ದಾರೆಯೇ ಹೊರತು ಉತ್ತಮ ಚಿಕಿತ್ಸೆಯ ಯಾವ ಆಶಯವೂ ಇಲ್ಲ. ವೆನ್ಲಾಕ್​ಗೆ ಹೋದಲ್ಲಿ ದ್ವಿತೀಯ ದರ್ಜೆಯ ರೋಗಿಗಳ ರೀತಿಯಲ್ಲಿ ನೋಡಲಾಗುತ್ತದೆ. ಆದ್ದರಿಂದ ಇಂದು ಜನತೆಗೆ ಇದನ್ನು ಪ್ರಶ್ನಿಸಬೇಕಾದ ಸ್ಥಿತಿ ಇದೆ ಎಂದು ಹೇಳಿದರು.

ವೈದ್ಯಕೀಯ ಅಧಿನಿಯಮ 2007ರಲ್ಲಿ ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ಹಾಕಿದೆ. ಈ ಮೂಲಕ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಕಾಣುವ ರೀತಿಯಲ್ಲಿ ಚಿಕಿತ್ಸೆಯ ದರ ಪಟ್ಟಿಗಳನ್ನು ಹಾಕಬೇಕು. ರೋಗಿಯ ಜೊತೆಗಿರುವವರಿಗೆ ಅಡ್ಮಿಟ್ ಆಗುವ ಮೊದಲೇ ದರ ಪಟ್ಟಿಯ ಕುರಿತು ಮಾಹಿತಿ ನೀಡಬೇಕು. ಆದರೆ ಯಾವುದೇ ಆಸ್ಪತ್ರೆಗಳಲ್ಲಿ ಇದು ಪಾಲನೆಯಾಗುತ್ತಿಲ್ಲ. ಆದರೆ ಜನಪ್ರತಿನಿಧಿಗಳಿಗೆ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದಾದಲ್ಲಿ ಕನಿಷ್ಠ ಪಕ್ಷ ಸರ್ಕಾರಿ ಆಸ್ಪತ್ರೆಗಳಿಗೆ ಸೌಲಭ್ಯ, ಸವಲತ್ತುಗಳನ್ನು ಒದಗಿಸಿ ಎನ್ನುವುದು ನಮ್ಮ ಪ್ರಧಾನ ಬೇಡಿಕೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ವೈದ್ಯ ಡಾ. ದೇವಿದಾಸ್ ಶೆಟ್ಟಿ ಮಾತನಾಡಿ, ರಾಜಕಾರಣಿಗಳಿಗೆ ರೋಗ ಬಂದಲ್ಲಿ ಅವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಮಲಗುತ್ತಾರೆ. ಆದರೆ ಅವ್ಯವಸ್ಥೆಗಳಿದ್ದರೂ ಬಡವರಿಗೆ ಕಾಯಿಲೆ ಬಂದಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇದ್ದಲ್ಲಿ‌ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಬೇಕು. ದ.ಕ ಜಿಲ್ಲೆಯ ಜನಪ್ರತಿನಿಧಿಯಾಗಿದ್ದ ಯು.ಶ್ರೀನಿವಾಸ ಮಲ್ಯ 1950ರಂದು ದ.ಕ ಜಿಲ್ಲೆಗೆ ತಾಂತ್ರಿಕ ಶಿಕ್ಷಣ ಕೇಂದ್ರ ಬೇಕೆಂದು ಪಾರ್ಲಿಮೆಂಟ್ ಮುಂದೆ ಧರಣಿ ಕೂತಿದ್ದರು. ಅಂತಹ ಇಚ್ಛಾಶಕ್ತಿಯ ಕೊರತೆಯುಳ್ಳ ರಾಜಕಾರಣಿಗಳು ನಮ್ಮಲ್ಲಿದ್ದಾರೆ. ‌ನಮ್ಮ ರಾಜಕಾರಣಿಗಳು ಮನಸ್ಸು ಮಾಡಿದ್ದಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ರಾಜ್ಯದಲ್ಲಿಯೇ ನಂಬರ್ 1 ಮೆಡಿಕಲ್ ಕಾಲೇಜು ಮಾಡಬಹುದು ಎಂದು ಹೇಳಿದರು.

Last Updated : Oct 12, 2020, 2:46 PM IST

ABOUT THE AUTHOR

...view details