ಸುಳ್ಯ(ದಕ್ಷಿಣ ಕನ್ನಡ):ಕೆಎಸ್ಆರ್ಟಿಸಿ ಬಸ್ ನಿರ್ವಾಹಕನೋರ್ವ ಪ್ರಯಾಣಿಕನ ಎದೆಗೆ ಕಾಲಿನಿಂದ ಒದ್ದು, ರಸ್ತೆಗೆ ತಳ್ಳಿರುವ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ನಿನ್ನೆ ನಡೆದಿದೆ. ಈಶ್ವರಮಂಗಲ ಪೇಟೆಯ ಜಂಕ್ಷನ್ನಲ್ಲಿ ಘಟನೆ ನಡೆದಿದೆ. ಪ್ರಯಾಣಿಕನ ಜೊತೆ ಅನುಚಿತ ವರ್ತನೆ ತೋರಿದ ವ್ಯಕ್ತಿಯನ್ನು ಕೆಎ 21 ಎಫ್ 0002 ಬಸ್ ನಂಬರ್‌ನ ನಿರ್ವಾಹಕ ಸುಬ್ಬರಾಜ್ ರೈ ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ಈ ಪ್ರಯಾಣಿಕ ಪಾನಮತ್ತನಂತೆ ಕಂಡು ಬರುತ್ತಿದ್ದಾನೆ. ಬಸ್ ಹತ್ತುವಾಗಲೇ ನಿರ್ವಾಹಕ ಪ್ರಯಾಣಿಕನನ್ನು ತಡೆದು ಆತನ ಕೊಡೆಯನ್ನು ರಸ್ತೆಗೆಸೆಯುತ್ತಾನೆ. ನಂತರ ಬಸ್ಸಿನಿಂದ ಕೆಳಗಿಳಿಯುವಂತೆ ಸೂಚಿಸಿದ ನಿರ್ವಾಹಕ ಪ್ರಯಾಣಿಕನಿಗೆ ಕೈಯಿಂದ ಹಲ್ಲೆ ನಡೆಸಿದ್ದಾನೆ. ಕೊನೆಗೆ, ಥೇಟ್ ಸಿನಿಮಾ ಶೇಲಿಯಲ್ಲೇ ಕಾಲಿನಿಂದ ಪ್ರಯಾಣಿಕನ ಎದೆಗೆ ಒದ್ದು, ರಸ್ತೆಗೆ ತಳ್ಳಿದ್ದಾನೆ. ರಸ್ತೆಯಲ್ಲಿ ಬಿದ್ದ ಪ್ರಯಾಣಿಕನನ್ನು ಅಲ್ಲಿಯೇ ಬಿಟ್ಟು ಬಸ್ ಸಂಚರಿಸಿದೆ.