ದಕ್ಷಿಣ ಕನ್ನಡ/ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಅಡಿಕೆ ಬೆಳೆ ನಿಷೇಧದ ವದಂತಿಗೆ ತೆರೆ ಬಿದ್ದಿದೆ. ಅಡಿಕೆ ಬೆಳೆ ನಿಷೇಧ ಆಗುವುದಿಲ್ಲ ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಕಿವಿಗೊಡಬೇಡಿ. ಅಡಿಕೆ, ಗುಟ್ಕಾ ನಿಷೇಧದ ಹೇಳಿಕೆಗಳು ಬರೀ ವದಂತಿಗಳು. ಅಪಪ್ರಚಾರದ ಹೇಳಿಕೆಗಳಿಗೆ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದು ಸಂಘ ತಿಳಿಸಿದೆ.
ಈ ವೇಳೆ ಮಾತನಾಡಿದ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ
ಈಗ ಎಲ್ಲಡೆಯೂ ಕೊರೊನಾ ವೈರಸ್ ಭೀತಿ ಆವರಿಸಿದೆ. ಹೀಗಾಗಿ, ಅಲ್ಲಿನ ರಾಜ್ಯ ಸರ್ಕಾರಗಳು ವೈರಸ್ ಹರಡುವುದನ್ನು ತಡೆಯಲು ಕೆಲವು ಕಠಿಣ ನಿಯಮಗಳನ್ನು ಹಾಕಿದೆ. ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಕೆಲವು ವಸ್ತುಗಳ ಮಾರಾಟ ನಿಷೇಧ ಇರುತ್ತದೆ ಎಂದಿದೆ.
ಈ ಬಗ್ಗೆ ಜನಪ್ರತಿನಿಧಿಗಳು, ಸಂಸ್ಥೆಗಳು, ಅಡಿಕೆ ಬೆಳೆಯುವ ಪ್ರದೇಶದ ಸಂಸದರು ಸರ್ಕಾರದ ಗಮನಕ್ಕೆ ತಂದಿದ್ದಾರೆ. ದಕ್ಷಿಣ ಕನ್ನಡ, ಕಾಸರಗೋಡಿನಲ್ಲಿ ಅಡಿಕೆ ಖರೀದಿಗೆ ಕ್ಯಾಂಪ್ಕೋ ಹಾಗೂ ಶಿರಸಿಯಲ್ಲಿ ಟಿಎಸ್‍ಎಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದೆ.
ಲಾಕ್ಡೌನ್ ಮುಗಿದ ತಕ್ಷಣವೇ ಅಡಿಕೆ ಮಾರುಕಟ್ಟೆ ಸಹಜ ಸ್ಥಿತಿಗೆ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಈಗಿನ ಪರಿಸ್ಥಿತಿಗಿಂತ ಅಲ್ಪ ಸುಧಾರಣೆ ಕಾಣಬಹುದು. ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಒತ್ತಡ ತರಲಾಗುವುದು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಹೇಳಿದರು.