ಕರ್ನಾಟಕ

karnataka

ETV Bharat / state

ಗುದನಾಳದಲ್ಲಿ ಮರೆಮಾಡಿ ಚಿನ್ನ ಸಾಗಣೆ: ಮಂಗಳೂರು ಏರ್​ಪೋರ್ಟ್​ನಲ್ಲಿ 98 ಲಕ್ಷ ರೂ. ಮೌಲ್ಯದ ಬಂಗಾರ ವಶ - ವಿಮಾನ ನಿಲ್ದಾಣ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​​​ ಅಧಿಕಾರಿಗಳು 1,579 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಅಕ್ರಮ ಚಿನ್ನ
ಅಕ್ರಮ ಚಿನ್ನ

By ETV Bharat Karnataka Team

Published : Jan 9, 2024, 10:47 AM IST

ಮಂಗಳೂರು(ದಕ್ಷಿಣ ಕನ್ನಡ):ಗುದನಾಳದಲ್ಲಿ ಮರೆ ಮಾಡಿ ಚಿನ್ನ ಸಾಗಾಟ ಮಾಡುತ್ತಿರುವುದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​​​ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಜನವರಿ 8 ರಂದು ಏರ್​ ಇಂಡಿಯಾ ಎಕ್ಸ್‌ಪ್ರೆಸ್​ ಫ್ಲೈಟ್​​​​ IX 816 ಮೂಲಕ ಅಬುಧಾಬಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ. ಪ್ರಯಾಣಿಕನ ಅನುಮಾನಾಸ್ಪದ ಚಲನವಲನದ ಆಧಾರದ ಮೇಲೆ, ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ.

ಆತನ ದೇಹವನ್ನು ಪರೀಕ್ಷಿಸುವಾಗ, ಅವರ ಸೊಂಟದ ಪ್ರದೇಶದಲ್ಲಿ ಬೀಪ್ ಶಬ್ದ ಹೊರಹೊಮ್ಮಿದೆ. ಪೇಸ್ಟ್ ರೂಪದಲ್ಲಿ ಚಿನ್ನವನ್ನು ಹೊಂದಿರುವ 5 ಅಂಡಾಕಾರದ ವಸ್ತುಗಳನ್ನು ಆ ವ್ಯಕ್ತಿ ಗುದನಾಳದಲ್ಲಿ ಮರೆಮಾಡಿ ಇಟ್ಟುಕೊಂಡಿದ್ದ. ಅದರಲ್ಲಿ 24 ಕ್ಯಾರೆಟ್ ಶುದ್ಧತೆಯ 1,579 ಗ್ರಾಂ ಚಿನ್ನ ಪತ್ತೆಯಾಗಿದೆ. ಇದರ ಮೌಲ್ಯ ರೂ. 98,68,750 ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಗುದನಾಳದಲ್ಲಿಟ್ಟು ಚಿನ್ನ ಸಾಗಣೆ; ₹3 ಕೋಟಿ ಮೌಲ್ಯದ 5 ಕೆ.ಜಿ ಚಿನ್ನ ಜಪ್ತಿ

ಹಿಂದಿನ ಪ್ರಕರಣಗಳು:ಕಳೆದನವೆಂಬರ್​ನಲ್ಲಿ 70 ಲಕ್ಷದ ಚಿನ್ನ ವಶ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಬ್ಬರು ಅಕ್ರಮವಾಗಿ 70 ಲಕ್ಷ ರೂ. ಮೌಲ್ಯದ ಚಿನ್ನವನ್ನು ಸಾಗಿಸುತ್ತಿದ್ದರು. ನವೆಂಬರ್ 09 ಮತ್ತು 13 ರಂದು ಮಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಇಂಡಿಗೋ ಫ್ಲೈಟ್ 6E1163 ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ IX814 ಮೂಲಕ ದುಬೈನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು‌ ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿತ್ತು. ಆರೋಪಿಗಳು ಚಿನ್ನವನ್ನು ಟ್ರಾಲಿ ಬ್ಯಾಗ್‌ನಲ್ಲಿ ರಾಡ್‌ಗಳ ರೂಪದಲ್ಲಿ ಮರೆಮಾಡಿರುವುದು ಮತ್ತು ಗಡಿಯಾರ, ಬಾಲ್-ಪಾಯಿಂಟ್ ಪೆನ್, ಹೇರ್ ಟ್ರಿಮ್ಮರ್​ಗಳಲ್ಲಿ ಮರೆ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದದು ತನಿಖೆ ಬಳಿಕ ಗಮನಕ್ಕೆ ಬಂದಿತ್ತು.

ಇದಕ್ಕೂ ಮುನ್ನ ಸೆಪ್ಟೆಂಬರ್​​ ತಿಂಗಳಿನಲ್ಲಿ ಅಕ್ರಮ 14.50 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದು, ಕಸ್ಟಮ್ಸ್‌ ಅಧಿಕಾರಿಗಳು ಜಪ್ತಿ ಮಾಡಿದ್ದರು. ಆರೋಪಿ ದುಬೈನಿಂದ ಮಂಗಳೂರಿಗೆ ಏರ್​ ಇಂಡಿಯಾ ವಿಮಾನದಲ್ಲಿ ಬಂದಿದ್ದರು. ರಟ್ಟಿನ ಪೆಟ್ಟಿಗೆಯ ಒಳಭಾಗದಲ್ಲಿ ಇರಿಸಲಾಗಿದ್ದ ನಾಲ್ಕು ನೀಲಿ ಬಣ್ಣದ ದಪ್ಪದ ಕಾಗದದ ಹಾಳೆಗಳ ಎರಡು ಪದರಗಳ ನಡುವೆ ಚಿನ್ನದ ಪೌಡರ್ ಅಡಗಿಸಿಡಲಾಗಿತ್ತು.

ABOUT THE AUTHOR

...view details