ಮಂಗಳೂರು:ಕೆನಡಾದ ಸೇಂಟ್ ಜಾನ್ಸ್ ನ್ಯೂಫೌಂಡ್ ಲ್ಯಾಂಡ್ನಲ್ಲಿ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ 4 ಚಿನ್ನದ ಪದಕ ಹಾಗೂ 2 ಬೆಳ್ಳಿ ಪದಕ ಗಳಿಸಿದ ಪ್ರದೀಪ್ ಕುಮಾರ್ ಆಚಾರ್ಯ ಮತ್ತು ಎರಡು ಚಿನ್ನದ ಪದಕ ಪಡೆದಿರುವ ರಿತ್ವಿಕ್ ಅಲೆವೂರಾಯ ಅವರಿಗೆ ಇಂದು ತವರಿನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಇಂದು ಸಂಜೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಮ್ಮ ಕೋಚ್ ಸತೀಶ್ ಕುಮಾರ್ ಕುದ್ರೋಳಿ ಅವರೊಂದಿಗೆ ಬಂದಿಳಿದ ಅವರು ಪದಕಗಳಿಗೆ ಮುತ್ತಿಕ್ಕುವ ಮೂಲಕ, ಭಾರತ ಮಾತಾ ಕಿ ಜೈ ಎಂದು ಘೋಷಣೆ ಹಾಕುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ಎಲ್ಲರೂ ಹೂಗುಚ್ಚ ನೀಡುವ ಮೂಲಕ ಹೂ ಹಾರಗಳನ್ನು ತೊಡಿಸಿ ಅಭಿನಂದನೆ ಸಲ್ಲಿಸಿದರು.
ಚಿನ್ನದ ಪದಕ ಗೆದ್ದ ಸ್ಪರ್ಧಿಗಳಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ತರಬೇತುದಾರ ಸತೀಶ್ ಕುಮಾರ್ ಕುದ್ರೋಳಿ ಮಾತನಾಡಿ, ಸೆ.15ರಿಂದ 21ರವರೆಗೆ ಕೆನಡಾದ ಸೇಂಟ್ ಜಾನ್ಸ್ ನ್ಯೂಫೌಂಡ್ ಲ್ಯಾಂಡ್ನಲ್ಲಿ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಡೆಯಿತು. ಇದರಲ್ಲಿ ನಮ್ಮ ದೇಶದ 24 ಸ್ಪರ್ಧಾಳುಗಳು ಭಾಗವಹಿಸಿದ್ದರು. ಅದರಲ್ಲಿ ಮೂವರು ಕರ್ನಾಟಕದವರಾಗಿದ್ದರು. ಈ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ನಲ್ಲಿ 26 ಚಿನ್ನ, 9ಬೆಳ್ಳಿ, 2ಕಂಚು ಲಭಿಸಿತ್ತು. ಕರ್ನಾಟಕದ ಸ್ಪರ್ಧಿಗಳಾದ ಪ್ರದೀಪ್ ಕುಮಾರ್ ಆಚಾರ್ಯ, ರಿತ್ವಿಕ್ ಅಲೆವೂರಾಯ ಹಾಗೂ ವಿಶ್ವನಾಥ ಭಾಸ್ಕರ್ ಗಾಣಿಗ ಮೂವರೂ ಚಿನ್ನದ ಪದಕ ಗಳಿಸಿದ್ದರು. ಅಲ್ಲದೇ ಪ್ರದೀಪ್ ಕುಮಾರ್ ಸ್ಟ್ರಾಂಗ್ ಮೆನ್ ಪದವಿಯನ್ನು ಕೂಡಾ ಪಡೆದಿರುತ್ತಾರೆ. ವಿಶ್ವನಾಥ ಡೆಡ್ ಲಿಫ್ಟ್ನಲ್ಲಿ ಕಾಮನ್ ವೆಲ್ತ್ ರೆಕಾರ್ಡ್ ಕೂಡಾ ಮಾಡಿದ್ದಾರೆ.
ನಮ್ಮ ದೇಶದಿಂದ ಬಹಳಷ್ಟು ಮಂದಿ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರೂ, ಕೆನಡಾ ದೇಶದ ಎಂಬೆಸಿ ವೀಸಾ ಕೊಡದ ಕಾರಣ ಕೇವಲ 30 ಮಂದಿ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ಬಂತು. ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಿದ್ದರೆ ಇನ್ನಷ್ಟು ಪದಕಗಳು ಲಭಿಸುತ್ತಿತ್ತು. ಹಾಗಾಗಿ ಮುಂದೆ ಸರಕಾರ ವೀಸಾ ಕೊಡಿಸುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಎಂದು ಸತೀಶ್ ಕುಮಾರ್ ಕುದ್ರೋಳಿ ಹೇಳಿದರು.
ಸ್ಪರ್ಧೆಯಲ್ಲಿ ವಿಜೇತರಾಗಿರುವ ಪ್ರದೀಪ್ ಕುಮಾರ್ ಆಚಾರ್ಯ ಮಾತನಾಡಿ, ನಮಗೆ ಇಂದು ದೊರೆತ ಈ ಅದ್ದೂರಿ ಸ್ವಾಗತ ಕಂಡು ನಮಗೆ ಈ ಹಿಂದೆ ಸ್ಪರ್ಧೆಗೆ ನಡೆಸಿದ ಕಷ್ಟವು ಏನೂ ಅಲ್ಲವೆಂದು ತೋರುತ್ತದೆ. ಪ್ರತಿಯೊಬ್ಬ ಭಾರತೀಯ ಪವರ್ ಲಿಫ್ಟರ್ ಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗಳಿಸಬೇಕೆಂದು ಕನಸು ಇರುತ್ತದೆ. 2017ನಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಲಭಿಸಿತ್ತು. ಆದರೆ, ಈ ಬಾರಿ ಚಿನ್ನದ ಪದಕದೊಂದಿಗೆ ಬೆಸ್ಟ್ ಲಿಫ್ಟರ್ ಪ್ರಶಸ್ತಿಯೂ ಲಭಿಸಿದೆ. ಇದರಿಂದ ತುಂಬಾ ಸಂತೋಷ ವಾಗುತ್ತಿದೆ ಎಂದು ಹೇಳಿದರು.