ಕಡಬ(ದ.ಕನ್ನಡ): 'ಗತಿ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನನ್ನು ಕಾರಣ ಮಾಡಬೇಡಿ' ಎಂಬ ಬರವಣಿಗೆಯ ಫಲಕವನ್ನು ಕುತ್ತಿಗೆಗೆ ನೇತು ಹಾಕಲಾಗಿರುವ ಆಡು ಕಡಬ ಪೇಟೆಯಲ್ಲಿ ತಿರುಗಾಡುತ್ತಿದೆ.
ದಿನಂಪ್ರತಿ ಬೆಳಗಾದರೆ ಸಾಕು, ಕಡಬ ಪೇಟೆಯಲ್ಲಿ ಹಲವಾರು ಆಡುಗಳು ರಸ್ತೆಯಲ್ಲಿ ಸಂಚರಿಸುವ ಮೂಲಕ ಬೈಕ್ ಹಾಗೂ ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಧ್ವನಿವರ್ಧಕದ ಮೂಲಕ ಸಾಕು ಪ್ರಾಣಿಗಳನ್ನು ಬೀದಿಗೆ ಬಿಟ್ಟರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮತ್ತು ಆಡುಗಳನ್ನು ಏಲಂ ಮಾಡುವ ಎಚ್ಚರಿಕೆ ನೀಡಿತ್ತು.
ಕಡಬ ಪೇಟೆಯ ರಸ್ತೆಯಲ್ಲಿ ಆಡುಗಳ ಸಂಚಾರ ಆದರೂ ಕಡಬ ಪೇಟೆಯಲ್ಲಿ ಮಾತ್ರ ಆಡುಗಳ ಹಾವಳಿ ತಪ್ಪಿಲ್ಲ. ಬೀದಿಗೆ ಬರುವ ಸಾಕು ಪ್ರಾಣಿಗಳನ್ನು ನಿಯಂತ್ರಿಸಲು ಪಟ್ಟಣ ಪಂಚಾಯತ್ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಎಂಬಂತೆ ಇದೀಗ ಆಡೊಂದರ ಕುತ್ತಿಗೆಯಲ್ಲಿರುವ 'ಗತಿ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನನ್ನು ಕಾರಣ ಮಾಡಬೇಡಿ' ಎಂಬ ಬರವಣಿಗೆ ಫಲಕವೊಂದು ಸಾರ್ವಜನಿಕವಾಗಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆಡಿನ ಕುತ್ತಿಗೆಗೆ ನಾಮಫಲಕವನ್ನು ಯಾರು ಹಾಕಿದ್ದಾರೆಂಬ ಮಾಹಿತಿ ಇಲ್ಲ. ಸಾರ್ವಜನಿಕರು ನಿರಂತರವಾಗಿ ಮನವಿ, ದೂರುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದರೂ ಯಾವುದೇ ಕ್ರಮ ಕೈಗೊಳ್ಳದ ಪಟ್ಟಣ ಪಂಚಾಯತ್ ಅಧಿಕಾರಿಗಳ ಅಸಡ್ಡೆ ವರ್ತನೆಗೆ ಇದೊಂದು ನಿದರ್ಶನ ಎಂಬುದು ಸಾರ್ವಜನಿಕರ ಮಾತು.
ಈ ನಡುವೆ ಸಾರ್ವಜನಿಕರ ದೂರಿಗೆ ಸ್ವಂದಿಸದ ಪಟ್ಟಣ ಪಂಚಾಯತ್ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಲು ಸಮಾನಮನಸ್ಕರ ತಂಡವೊಂದು ಸಿದ್ಧತೆ ನಡೆಸಿದೆ.