ಬೆಳ್ತಂಗಡಿ (ದಕ್ಷಿಣ ಕನ್ನಡ):ಆರೋಗ್ಯ ಕಾಪಾಡಲು ಸಾವಿರಾರು ವರ್ಷಗಳಿಂದ ಭಾರತದಲ್ಲಿ ಋಷಿ ಮುನಿಗಳು ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಬಳಸುತ್ತಿದ್ದ ಪ್ರಕೃತಿ ಚಿಕಿತ್ಸಾ ಪದ್ಧತಿ ಮತ್ತು ಯೋಗ ವಿಜ್ಞಾನವು ವಿಶ್ವದಲ್ಲೇ ಅತ್ಯಂತ ಜನಪ್ರಿಯ ಹಾಗೂ ಶ್ರೇಷ್ಠ ಶುಶ್ರೂಷಾ ವಿಧಾನವಾಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.
ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಉಜಿರೆಯ ಎಸ್ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 230 ಪದವೀಧರರಿಗೆ ಪದವಿ ಪ್ರದಾನ ಮಾಡಿ ಶುಭ ಹಾರೈಸಿದರು. ಬಳಿಕ ಮಾತನಾಡಿದ ಪ್ರಮೋದ್ ಸಾವಂತ್ ಪ್ರಕೃತಿಯಲ್ಲಿರುವ ಪಂಚಭೂತಗಳನ್ನು ಬಳಸಿ ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲಾಗುತ್ತದೆ. ಆಧುನಿಕ ಆಹಾರ ಸೇವನಾ ವಿಧಾನ, ಸದಾ ಒತ್ತಡ, ಭಯ, ಆತಂಕ ಮತ್ತು ಗಡಿಬಿಡಿಯ ಜೀವನ ಶೈಲಿ ಹಾಗೂ ಸಕಾಲದಲ್ಲಿ ಊಟ, ನಿದ್ರೆ, ವಿಶ್ರಾಂತಿ ಮಾಡದಿರುವುದು ಮೊದಲಾದ ಹತ್ತು ಹಲವು ಕಾರಣಗಳಿಂದ ಪಂಚೇಂದ್ರಿಯಗಳ ನಿಯಂತ್ರಣವಿಲ್ಲದೆ ಎಲ್ಲರೂ ಅನೇಕ ರೋಗಗಳಿಗೆ ಬಲಿಯಾಗುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ನೇತೃತ್ವದಲ್ಲಿ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸ ಭಾರತಕ್ಕೆ ವಿಶ್ವ ಗುರುವಿನ ಮಾನ್ಯತೆ ದೊರಕಿದೆ. ವಿಶ್ವದೆಲ್ಲೆಡೆ ಜೂನ್ 21 ವಿಶ್ವಯೋಗ ದಿನಾಚರಣೆ ಮಾಡುತ್ತಿದ್ದೇವೆ. ಮಹಾತ್ಮಾ ಗಾಂಧೀಜಿ ಕೂಡಾ ಪ್ರಕೃತಿ ಚಿಕಿತ್ಸಾ ವಿಧಾನ ಮತ್ತು ಯೋಗಾಭ್ಯಾಸ ಬಳಸುತ್ತಿದ್ದರು. ನಾವು ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಎಷ್ಟು ಆರೋಗ್ಯವಂತರಾಗಿ ಬದುಕುತ್ತೇವೆ ಎಂಬುದು ಮುಖ್ಯ ಎಂದರು.
ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ: ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ಬಗ್ಗೆ ಜನರಿಗೆ ವಿಶ್ವಾಸ ಮತ್ತು ಗೌರವ ಬರುವಂತೆ ನೂತನ ಪದವೀಧರರು ಪ್ರಯತ್ನಿಸಬೇಕು. ಸದಾ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಉತ್ತಮ ಸಂವಹನ ಕಲೆಯನ್ನು ಬೆಳೆಸಿಕೊಂಡು ತಮ್ಮಲ್ಲಿ ಬಂದವರಿಗೆ ಆಪ್ತ ಸಮಾಲೋಚನೆ ಮತ್ತು ಆಪ್ತಸಲಹೆಯೊಂದಿಗೆ ಈ ಪ್ರಾಚೀನ ಪದ್ಧತಿ ಬಗ್ಯೆ ವಿಶ್ವಾಸ, ನಂಬಿಕೆ ಮತ್ತು ಗೌರವ ಮೂಡಿ ಬರುವಂತೆ ಮಾಡಬೇಕು. ಸದಾ ನಗುಮೊಗದೊಂದಿಗೆ ಮಾನವೀಯತೆಯಿಂದ ಸೇವೆ ನೀಡಬೇಕು ಎಂದು ಅವರು ಸಲಹೆ ನೀಡಿದರು.