ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಮಂಗಳೂರು: ಇಷ್ಟು ದಿನ ಕೂಲ್ ಆಗಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊಲೆ ಪ್ರಕರಣ ಜನರು ಮತ್ತು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಎರಡು ದಿನಗಳ ಹಿಂದೆ ಕೊಲೆ ಕೃತ್ಯ ಎಸಗಿದವರ ಮತ್ತು ಕುಮ್ಮಕ್ಕು ನೀಡಿದವರ ಆಸ್ತಿ ಮುಟ್ಟುಗೋಲು ಹಾಕಿ 10 ಕೋಟಿ ರೂ. ಹಣ ಪರಿಹಾರ ನೀಡಲಿ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಆಗ್ರಹಿಸಿದ್ದಾರೆ.
ಭಾನುವಾರ ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ನಡೆದಿರುವ ಎಲ್ಲಾ ಹತ್ಯೆಗಳು ಜನರ ಆತಂಕಕ್ಕೆ ಕಾರಣವಾಗಿದ್ದು, ಈವರೆಗೆ ನಡೆದ ಎಲ್ಲಾ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಕರಾವಳಿಯಲ್ಲಿ ಈವರೆಗೆ ನಡೆದಿರುವ ದ್ವೇಷ ಹತ್ಯೆಗಳ ಹಿಂದೆ ರಾಜಕೀಯದ ಜೊತೆಗೆ ಬೇರೆ ಷಡ್ಯಂತರವೂ ಇದೆ. ಇದನ್ನು ಬಯಲಿಗೆಳೆಯುವ ಕೆಲಸ ಸಿಬಿಐ ತನಿಖೆಯ ಮೂಲಕ ಆಗಬೇಕಿದೆ. ಕೊಲೆ ನಡೆಸಿದ ಆರೋಪಿಗಳು ಕೇವಲ ಹದಿನೈದು ದಿನಗಳೊಳಗೆ ಹೊರಗೆ ಬರುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಅಸಮಾಧಾನ ತಂದಿದೆ. ಕೊಲೆ ನಡೆಸಿರುವವರು ಹಾಗೂ ಅದಕ್ಕೆ ಸಹಕರಿಸಿದ ಆರೋಪಿಗಳ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು. ಅಂದಾಗ ಮಾತ್ರ ಇಂತಹ ದುಷ್ಕೃತ್ಯಗಳನ್ನು ಎಸಗುವ ಕಿಡಿಗೇಡಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದಂತೆ ಆಗುತ್ತದೆ ಎಂದು ಶಾಫಿ ಸಅದಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಲೆಗಡುಕರಿಂದಲೇ ಪರಿಹಾರದ ಹಣ ವಸೂಲಿ ಮಾಡಿ.. ಹತ್ಯೆಯಾದವರ ಕುಟುಂಬಕ್ಕೆ ಸರ್ಕಾರ ಪರಿಹಾರದ ಹಣ ನೀಡಬಾರದು. ಹತ್ಯೆ ಕೃತ್ಯದಲ್ಲಿ ಭಾಗಿಯಾದವರು ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದವರಿಂದಲೇ 10 ಕೋಟಿ ರೂ. ಹಣ ವಸೂಲಿ ಮಾಡಬೇಕು. ಆ ಹಣವನ್ನು ಕೊಲೆಗೀಡಾದವರ ಕುಟುಂಬಕ್ಕೆ ನೀಡುವ ಕೆಲಸ ಆಗಬೇಕಿದೆ. ಈ ಹಣವನ್ನು ಅಂಥವರ ಆಸ್ತಿಯನ್ನು ಮುಟ್ಟುಗೋಲು ಹಾಕಿಯಾದರೂ ವಸೂಲಿ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ:ಸುರತ್ಕಕಲ್ನಲ್ಲಿ ದುಷ್ಕರ್ಮಿಗಳಿಂದ ಚಾಕು ಇರಿತ.. ವ್ಯಕ್ತಿ ಸ್ಥಿತಿ ಗಂಭೀರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವರ್ಷ ಮೂರು ಕೊಲೆ.. ಜಿಲ್ಲೆಯಲ್ಲಿ ಈ ವರ್ಷ ಮೂರು ಕೊಲೆಗಳು ನಡೆದಿವೆ. ಶನಿವಾರ ರಾತ್ರಿ ಸುರತ್ಕಲ್ನ ಕೃಷ್ಣಾಪುರ ನಿವಾಸಿ ಜಲೀಲ್ ಎಂಬವರನ್ನು ಅವರು ನಡೆಸುತ್ತಿದ್ದ ಅಂಗಡಿ ಬಳಿ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜಲೀಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅದಲ್ಲದೇ ಇದೇ ವರ್ಷ ಜುಲೈನಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಕೊಲೆಗಳು ನಡೆದಿದ್ದವು.
ಜುಲೈ 26ರಂದು ಬೆಳ್ಳಲಾರೆ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಯುವ ನಾಯಕ ಪ್ರವೀಣ್ ನೆಟ್ಟಾರು ಅವರನ್ನು ಇದೇ ರೀತಿ ಅವರ ಕೋಳಿ ಅಂಗಡಿ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿ ಆಗಿದ್ದರು. ಅದಾದ ಎರಡು ದಿನಗಳಲ್ಲೇ ಜುಲೈ 28ರಂದು ಇದೇ ಸುರತ್ಕಲ್ನ ಕೃಷ್ಣಾಪುರದಲ್ಲಿ 24 ವರ್ಷದ ಮೊಹಮ್ಮದ್ ಫಾಜಿಲ್ ಎಂಬಾತನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ನಿಷೇಧಾಜ್ಞೆ ಜಾರಿ..ಈ ಕೊಲೆ ಪ್ರಕರಣದಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೆ, ಈ ಪ್ರಕರಣದ ತನಿಖೆಗೆ 8 ಜನ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ಆರೋಪಿಗಳ ಹೆಡೆಮುರಿ ಕಟ್ಟಲು ರಚಿಸಿರುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಭಾನುವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಜಲೀಲ್ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳ ಮಾಹಿತಿ ಪಡೆದು ಪೊಲೀಸರಿಂದ ಕ್ರಮ ಎಂದ ಸಿಎಂ