ಮಂಗಳೂರು (ದಕ್ಷಿಣಕನ್ನಡ): ಸುಮಾರು ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕನೋರ್ವ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ಬಾಲಕಿಗೆ ಸುಮಾರು ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಂ ಮೂಲಕ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಪರಿಚಯವಾಗಿತ್ತು. ಈ ಬಾಲಕನು ಮೊಬೈಲ್ನಲ್ಲಿ ಬಾಲಕಿಗೆ ಮೆಸ್ಸೇಜ್ ಮಾಡುತ್ತಿದ್ದು, ಬಾಲಕಿಯ ಮನೆಗೆ ಬರುವುದಾಗಿ ತಿಳಿಸುತ್ತಿದ್ದನಂತೆ.
ಅಂತೆಯೇ ಆ.13 ರಂದು ಬಾಲಕನು 'ನಾನು ಮನೆಗೆ ಬರುತ್ತಿದ್ದೇನೆ. ನೀನು ಬಾಗಿಲು ತೆಗೆಯಬೇಕು. ತೆಗೆಯದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆಂದು' ಹೆದರಿಸಿದ್ದಾನೆ. ರಾತ್ರಿ ಎಲ್ಲರೂ ಮಲಗಿದ ಬಳಿಕ, ಮಧ್ಯರಾತ್ರಿ 12 ಗಂಟೆಗೆ ಬಾಲಕಿಯ ಮನೆಯ ಬಳಿ ಈ ಬಾಲಕ ಬಂದಿದ್ದಾನೆ. ಬಳಿಕ ಆಕೆಗೆ ನಿಮ್ಮ ಮನೆಯ ಬಳಿ ಬಂದಿರುವುದಾಗಿ ಮೆಸೇಜ್ ಮಾಡಿದ್ದು, ಬಾಲಕಿ ಆತನನ್ನು ತಾನು ಮಲಗಿದ್ದ ಬೆಡ್ರೂಂಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಆತ ಬಾಲಕಿಯ ಮೇಲೆ ಅತ್ಯಾಚಾರಗೈದಿರುವುದಾಗಿ ಹೇಳಲಾಗ್ತಿದೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದನಂತೆ. ಇದೇ ರೀತಿ ಈತ ಸುಮಾರು ನಾಲ್ಕೈದು ಬಾರಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿದೆ.
ಮತ್ತೆ ಸೆ. 2 ರಂದು ರಾತ್ರಿ ಮನೆಗೆ ಬರುವುದಾಗಿ ಈತ ಬಾಲಕಿಗೆ ತಿಳಿಸಿದ್ದು, ಆಕೆ ಬೇಡವೆಂದರೂ ರಾತ್ರಿ ಸುಮಾರು 11.50ಕ್ಕೆ ಬಾಲಕಿಯ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಬಾಲಕಿಯು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರಿನಂತೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ :ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ: ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನಕ್ಕೆ ಭಕ್ತರ ಪಟ್ಟು