ಕಡಬ:ಶಾಲೆಯಿಂದ ಹೊರಟು ಬಸ್ ಏರಿ ನಿಗದಿತ ಸ್ಥಳದಲ್ಲಿ ಇಳಿಯದೆ 6ನೇ ತರಗತಿ ಬಾಲಕಿಯೋರ್ವಳು ನಾಪತ್ತೆಯಾಗಿ ಹಲವು ಗಂಟೆಗಳ ಬಳಿಕ ಕೊಂಬಾರು ಎಂಬಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ಅಪಹರಿಸಲಾಗಿದೆ ಎನ್ನಲಾಗಿದೆ. ಆರೋಪಿಯೋರ್ವನನ್ನು ಕಡಬ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ನಿನ್ನೆ ಸಾಯಂಕಾಲ ನಡೆದಿದೆ.
ಕಡಬ ತಾಲೂಕಿನ ಶಾಲೆಯೊಂದರ ಈ ವಿದ್ಯಾರ್ಥಿನಿ ಶಾಲೆ ಬಿಟ್ಟ ಬಳಿಕ ಮನೆಗೆ ಸರ್ಕಾರಿ ಬಸ್ ಏರಿದ್ದಳು. ಆದರೆ ತನ್ನ ನಿಲುಗಡೆ ನಿಲ್ದಾಣದಲ್ಲಿ ಇಳಿಯದೆ ಮುಂದಕ್ಕೆ ಹೋಗಿ ಸಂಜೆಯವರೆಗೂ ನಾಪತ್ತೆಯಾಗಿದ್ದಳು.
ಮನೆಯವರು, ಕುಟುಂಬಸ್ಥರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿ ಸಹಕರಿಸಲು ಮನವಿ ಮಾಡಲಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಿಳಿನೆಲೆ ಬಳಿ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದು, ತನ್ನನ್ನು ವ್ಯಕ್ತಿಯೋರ್ವ ಅಪಹರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಕೊಂಬಾರಿನ ರಾಮಣ್ಣ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿ ನೀಡುವ ಹೇಳಿಕೆ ಹಾಗೂ ರಾಮಣ್ಣ ಎಂಬಾತನ ಜೊತೆಗೆ ಕೆಲಸ ಮಾಡುವವರು ಹೇಳುವ ಹೇಳಿಕೆಗಳು ಗೊಂದಲವಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ರಾಮಣ್ಣ ಕಡಬದಿಂದ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾಗಿ ಕೆಲವರು ಹೇಳುತ್ತಿದ್ದಾರೆ. ಆದರೆ ಬಾಲಕಿ ತನ್ನನ್ನು ಶಾಲೆಯ ಹತ್ತಿರದಿಂದಲೇ ಅಪಹರಿಸಿದ್ದಾಗಿ ಹೇಳುತ್ತಿದ್ದು, ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಇದನ್ನೂ ಓದಿ:ಒಡಿಶಾದಿಂದ ಬಂದ ವಿಶೇಷಚೇತನ ಬಾಲಕ ನಾಪತ್ತೆ: ಮನಕಲಕುವಂತಿದೆ ಕುಟಂಬಸ್ಥರ ಗೋಳಾಟ