ಪುತ್ತೂರು(ದಕ್ಷಿಣ ಕನ್ನಡ):ನವರಾತ್ರಿ ಬಂತೆಂದರೆ ಸಾಕು ಎಲ್ಲಾ ದೇವಿ ದೇವಸ್ಥಾನಗಳಲ್ಲಿ ವಿಶೇಷ ಆರಾಧನೆಗಳು ಜರುಗುತ್ತವೆ. ಇನ್ನೊಂದೆಡೆ ವಿವಿಧ ವೇಷಧಾರಿಗಳು ಮನೆ ಮನೆಗೆ ಆಗಮಿಸಿ ಜನರ ಮನತಣಿಸುತ್ತಾರೆ. ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ತರಹದ ವೇಷಗಳನ್ನು ನವರಾತ್ರಿಯ ಒಂಬತ್ತು ದಿನಗಳಲ್ಲಿ ನೋಡಬಹುದು. ಆದ್ರೆ ಪ್ರೇತದ ವೇಷದ ಮೂಲಕ ಪುತ್ತೂರಿನ ವ್ಯಕ್ತಿಯೊಬ್ಬರು ಕಳೆದ 13 ವರ್ಷಗಳಿಂದ ಗಮನ ಸೆಳೆಯುತ್ತಿದ್ದಾರೆ.
ಹೌದು, ಈ ರೀತಿ ಪ್ರೇತ ವೇಷದ ಮೂಲಕ ತನ್ನ ಹರಕೆಯನ್ನು ತೀರಿಸುತ್ತಾ ಬರುತ್ತಿರುವವರು ತಾಲೂಕಿನ ಕೆಮ್ಮಾಯಿ ನಿವಾಸಿ ದಿವಾಕರ್ ದೇವಾಡಿಗ. ಆಟೋ ಚಾಲಕನಾಗಿ ದುಡಿಯುತ್ತಿರುವ ದಿವಾಕರ್, ನವರಾತ್ರಿ ಬಂತೆಂದರೆ ಪ್ರೇತವಾಗಿ ಬಿಡುತ್ತಾರೆ. ನವರಾತ್ರಿಯ 9 ದಿನಗಳಲ್ಲಿ ಪ್ರೇತದ ವೇಷಧಾರಿಯಾಗುವ ಇವರು ವಿಚಿತ್ರವಾಗಿ ಅರಚಾಡುತ್ತಾ ಮನೆ ಮನೆಗೆ, ಅಂಗಡಿಗಳಿಗೆ ಅಲೆಯುತ್ತಾರೆ.
ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷ
ನವರಾತ್ರಿಯಲ್ಲಿ ಹುಲಿವೇಷ, ಪುರುಷವೇಷ, ಸ್ತ್ರೀವೇಷ ಹೀಗೆ ಹಲವು ವೇಷಗಳು ಸಾಮಾನ್ಯವಾಗಿದ್ದರೆ, ಪುತ್ತೂರಿನಲ್ಲಿ ದಿವಾಕರ್ ಹಾಕುವ ಪ್ರೇತದ ವೇಷ ತುಂಬಾನೆ ವಿಶೇಷವಾದುದು. ಹಲವು ವರ್ಷಗಳಿಂದ ನವರಾತ್ರಿಯಲ್ಲಿ ವೇಷ ಹಾಕುವುದನ್ನು ಕರಗತ ಮಾಡಿಕೊಂಡಿರುವ ಇವರು, ಈ ಹಿಂದೆ ರಾಘವೇಂದ್ರ ಸ್ವಾಮಿ ವೇಷ, ಈಶ್ವರನ ವೇಷ, ಕೃಷ್ಣನ ವೇಷ ಹೀಗೆ ದೇವರ ವೇಷಗಳನ್ನು ಹಾಕುತ್ತಿದ್ದರು.