ಮಂಗಳೂರು: ಹೈರಿಸ್ಕ್ ದೇಶವಾಗಿರುವ ಘಾನದಿಂದ ಬಂದ ಪ್ರಯಾಣಿಕರೊಬ್ಬರ ಆರ್ಟಿಪಿಸಿಆರ್ ತಪಾಸಣೆ ವೇಳೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತುರ್ತಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯಸ್ಥರ ಜೊತೆ ಸಭೆ ನಡೆಸಿದರು.
ಇಂದು ಮಧ್ಯಾಹ್ನ ವಿಮಾನ ನಿಲ್ದಾಣದ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸವಿಸ್ತಾರವಾಗಿ ಚರ್ಚಿಸಿ, ಘಾನ ದೇಶದಿಂದ ಬಂದ ಪ್ರಯಾಣಿಕರೊಬ್ಬರನ್ನು ನಿನ್ನೆ ರಾತ್ರಿಯೇ ವೆನ್ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಪ್ರಯಾಣಿಕರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿರುವುದಿಲ್ಲ.
ಆ ಪ್ರಯಾಣಿಕ ಆಸೀನವಾಗಿದ್ದ 3 ಸಾಲಿನ ಎದುರು ಹಾಗೂ 3 ಸಾಲಿನ ಹಿಂದಿನ ಪ್ರಯಾಣಿಕರು ಸೇರಿದಂತೆ ಒಟ್ಟು 27 ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಿ ಅವರನ್ನು ಆರೋಗ್ಯ ಇಲಾಖೆಯಿಂದ ಆರ್ಟಿಪಿಸಿಆರ್ ಮತ್ತು ರ್ಯಾಂಡಮೈಸ್ ಪರೀಕ್ಷೆಗೆ ಒಳಪಡಿಸಿ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವದ ಮಾದರಿಯನ್ನು ಜನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ನೀಡಿದರು.