ಮಂಗಳೂರು: ಮಂಗಳೂರಿನಿಂದ ಹೊರಟಿದ್ದ ಸರಕು ಸಾಗಣೆ ರೈಲಿನ ಗ್ಯಾಸ್ ಟ್ಯಾಂಕ್ನಿಂದ ಗ್ಯಾಸ್ ಸೋರಿಕೆಯಾದ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರೈಲನ್ನು ಮರಳಿ ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜೋಕಟ್ಟೆ ಬಳಿ ರೈಲ್ವೆ ಹಳಿ ಸುತ್ತಮುತ್ತ ಜನಸಂಚಾರ ನಿರ್ಬಂಧ ವಿಧಿಸಲಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಹೆಚ್ಪಿಸಿಎಲ್) ನಿಂದ ಟ್ಯಾಂಕರ್ಗಳಲ್ಲಿ ಗ್ಯಾಸ್ ತುಂಬಿಸಿ ಕಳುಹಿಸಲಾಗಿತ್ತು. ಆದರೆ, ರೈಲು ಏಳು ಕಿಲೋಮೀಟರ್ ತಲುಪಿದ ಬಳಿಕ ಗ್ಯಾಸ್ ಸೋರಿಕೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರೈಲು ವಾಪಾಸ್ ಹೆಚ್ಪಿಸಿಎಲ್ಗೆ ಆಗಮಿಸಿದೆ.
ಮಂಗಳೂರಿನಿಂದ ಸರಕು ಸಾಗಾಣೆ ರೈಲಿನಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ಗಳನ್ನು ಸಾಗಿಸಲಾಗುತ್ತಿತ್ತು. ಆದರೆ, ಟ್ಯಾಂಕರ್ವೊಂದರಲ್ಲಿ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಹೆಚ್ಪಿಸಿಎಲ್ ರೈಲು ಹಿಂದಿರುಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ:ರೈಲು ಪ್ರಯಾಣಿಸಿದ ಏಳು ಕಿಲೋ ಮೀಟರ್ ದಾರಿ ಮಧ್ಯೆ ಗ್ಯಾಸ್ ಸೋರಿಕೆಯಾದ ಹಿನ್ನೆಲೆಯಲ್ಲಿ ಜೋಕಟ್ಟೆ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರೈಲ್ವೆ ಗೇಟ್ ಬಳಿ ಅಗ್ನಿಶಾಮಕ ವಾಹನ ನಿಯೋಜನೆ ಮಾಡಲಾಗಿದ್ದು, ರೈಲ್ವೆ ಹಳಿ ಸುತ್ತಮುತ್ತಲೂ ನಾಗರಿಕರು ಬರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಘಟನೆಯಿಂದ ಜೋಕಟ್ಟೆ ಪ್ರದೇಶದ ಜನರು ಆತಂಕಗೊಂಡಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆ ನೀಡಿದ ಹವಮಾನ ಇಲಾಖೆ : ಇನ್ನೊಂದೆಡೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಇದರಿಂದ ಬೇಸಿಗೆ ಕಾಲದಲ್ಲಿ ರಣಬಿಸಿಲಿಗೆ ಹೈರಾಣಾಗಿದ್ದ ಜನ ಮತ್ತೆ ಆತಂಕಿತರಾಗಿದ್ದಾರೆ. ದಿನಕಳೆದಂತೆ ಮಾನವ ಮರ ಗಿಡಗಳನ್ನು ನಾಶ ಮಾಡಿ ಕಾಂಕ್ರೀಟ್ ಕಾಡು ಬೆಳೆಸುತ್ತಿದ್ದಾನೆ. ಇದರ ಪರಿಣಾಮ ಈ ರೀತಿಯ ತಾಪಮಾನದ ಏರಿಕೆಗೆ ಕಾರಣವಾಗಿದೆ.