ಕರ್ನಾಟಕ

karnataka

ETV Bharat / state

ತ್ಯಾಜ್ಯ ವಿಲೇವಾರಿಗೆ ಪುತ್ತೂರಿನ ಗ್ರಾ.ಪಂಚಾಯತಿಯಿಂದ ವಿನೂತನ ಪ್ರಯೋಗ - ಆಲಂಕೂರು ಗ್ರಾಪಂನಿಂದ ವಿನೂತನ ಪ್ರಯೋಗ

ಮನೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಲ್ಲೆಂದರಲ್ಲಿ ಬಿಸಾಡುವ ಬದಲು ಒಂದು ತೆಂಗಿನ ತೋಟವನ್ನೇ ಆರಂಭಿಸಿ, ಅದಕ್ಕೆ ಮೇಲುಗೊಬ್ಬರವಾಗಿ ತ್ಯಾಜ್ಯವನ್ನೇ ಉಣಬಡಿಸಲಾಗುತ್ತಿದೆ. ಈ ಮೂಲಕ ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಆಲಂಕೂರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು.

garbage disposal
ತ್ಯಾಜ್ಯ ವಿಲೇವಾರಿ

By

Published : Nov 22, 2021, 5:05 PM IST

Updated : Nov 22, 2021, 8:05 PM IST

ಪುತ್ತೂರು:ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲೇ ಸರಿ. ಕಸ ವಿಲೇವಾರಿಗೆ ಮಹಾನಗರ ಪಾಲಿಕೆಗಳೇ ಪರದಾಡುತ್ತಿರಬೇಕಾದರೆ, ಸ್ಥಳೀಯಾಡಳಿತಗಳ ಸ್ಥಿತಿಯನ್ನೊಮ್ಮೆ ಊಹಿಸಿಕೊಳ್ಳಿ. ಇದಲ್ಲದೇ, ತ್ಯಾಜ್ಯ ಸುರಿಯಲು ಸ್ಥಳದ ಸಮಸ್ಯೆ, ಇದರೊಂದಿಗೆ ಸುತ್ತಲಿನ ಜನರ ವಿರೋಧ.

ಮನೆಗಳಲ್ಲಿನ ಕಸವನ್ನು ಸಂಗ್ರಹಿಸಬಹುದು, ಅದನ್ನು ವಿಲೇವಾರಿ ಮಾಡುವುದು ಹೇಗೆ? ಎಂಬ ಸಮಸ್ಯೆಗೆ ಸಿಲುಕಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕೂರು ಗ್ರಾಮ ಪಂಚಾಯಿತಿಯ ವಿನೂತನ ಪ್ರಯೋಗ ಯಶಸ್ಸು ಕಂಡಿದೆ.

ಹೌದು, ಮನೆಗಳ ತ್ಯಾಜ್ಯವನ್ನು ಸಂಗ್ರಹಿಸಿ ಎಲ್ಲೆಂದರಲ್ಲಿ ಬಿಸಾಡುವ ಬದಲು ಒಂದು ತೆಂಗಿನ ತೋಟವನ್ನೇ ಆರಂಭಿಸಿ, ಅದಕ್ಕೆ ಮೇಲುಗೊಬ್ಬರವಾಗಿ ತ್ಯಾಜ್ಯವನ್ನೇ ಉಣಬಡಿಸಲಾಗುತ್ತಿದೆ. ಈ ಮೂಲಕ ತ್ಯಾಜ್ಯ ವಿಲೇವಾರಿಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ ಆಲಂಕೂರಿನ ಗ್ರಾಮ ಪಂಚಾಯಿತಿ ಅಧಿಕಾರಿಗಳು.

ತ್ಯಾಜ್ಯ ವಿಲೇವಾರಿಗೆ ಪುತ್ತೂರಿನ ಗ್ರಾ.ಪಂಚಾಯತಿಯಿಂದ ವಿನೂತನ ಪ್ರಯೋಗ

250 ತೆಂಗಿನ ಮರಗಳಿಗೆ ತ್ಯಾಜ್ಯ ಗೊಬ್ಬರ

ಗ್ರಾಮಗಳಲ್ಲಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ, ಭೂಮಿಯಲ್ಲಿ ಕರಗುವ ಕಸವನ್ನೆಲ್ಲಾ ತೆಂಗಿನ ಗಿಡಗಳ ಬುಡಗಳಿಗೆ ಹಾಕಲಾಗುತ್ತಿದೆ. ಸರ್ಕಾರದ ವಿವಿಧ ಅನುದಾನ ಬಳಸಿಕೊಂಡು 2 ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಹಾಗೂ 250ಕ್ಕೂ ಅಧಿಕ ತೆಂಗಿನ ಸಸಿಗಳ ತೋಟವನ್ನು ಮಾಡಲಾಗಿದೆ. 2 ವರ್ಷಗಳಲ್ಲೇ ಎಲ್ಲಾ ತೆಂಗಿನ ಗಿಡಗಳು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಕಸ ನಿರ್ವಹಣೆಯ ಜೊತೆಗೆ ಮುಂದಿನ 2 ವರ್ಷಗಳ ಬಳಿಕ ಈ ತೆಂಗಿನ ಸಸಿಗಳಿಂದ ಗ್ರಾಮಪಂಚಾಯತ್​ಗೆ ಆದಾಯವೂ ಬರುವ ನಿರೀಕ್ಷೆ ಹೊಂದಲಾಗಿದೆ.

ತೆಂಗಿನ ಗಿಡಗಳ ಜೊತೆಗೆ ಎರೆಹುಳು ಗೊಬ್ಬರ ಘಟಕ

ಆಲಂಕಾರು ಗ್ರಾಮಪಂಚಾಯತ್​ನ ಈ ಹಿಂದಿನ ಆಡಳಿತ ಮಂಡಳಿ ಈ ಯೋಜನೆಯನ್ನು ಜಾರಿಗೆ ತಂದಿದ್ದರೂ, ಈಗಿನ ಹೊಸ ಆಡಳಿತ ಮಂಡಳಿ ಈ ತೋಟದ ನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದೆ. ಮಣ್ಣಲ್ಲಿ ಕರಗುವ ಕಸವನ್ನು ತೆಂಗಿನ ಸಸಿಗಳ ಬುಡಕ್ಕೆ ಹಾಕಿ, ತೋಟಕ್ಕೆ ಬೇಕಾಗುವ ನೀರಿನ ವ್ಯವಸ್ಥೆಯನ್ನೂ ಬೋರ್​ವೆಲ್ ಮೂಲಕ ಕಲ್ಪಿಸಲಾಗಿದೆ.

ಅಲ್ಲದೇ, ತೆಂಗಿನ ಸಸಿಗಳಿಗೆ ಹಾಕಿ ಉಳಿದ ಕಸವನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ಎರೆಹುಳು ಗೊಬ್ಬರ ಘಟಕವನ್ನೂ ಪ್ರಾರಂಭಿಸಲಾಗಿದೆ. ತೋಟದ ತುಂಬಾ ಇಂಗು ಗುಂಡಿಗಳನ್ನೂ ಮಾಡಲಾಗಿದೆ. ಮಳೆಗಾಲದಲ್ಲಿ ನೀರು ಭೂಮಿಯಲ್ಲಿ ಇಂಗಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ತೆಂಗಿನ ಸಸಿಗಳ ಜೊತೆಗೆ ಮಲ್ಲಿಗೆ ಗಿಡಗಳನ್ನೂ ಬೆಳೆಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಆಲಂಕೂರು ಗ್ರಾಮ ಪಂಚಾಯಿತಿ.

Last Updated : Nov 22, 2021, 8:05 PM IST

ABOUT THE AUTHOR

...view details