ಕರ್ನಾಟಕ

karnataka

ETV Bharat / state

ಪಂಚಾಯತ್ ಗಡಿ ಗೊಂದಲದಿಂದ ತ್ಯಾಜ್ಯ ವಿಲೇವಾರಿಗೆ ಸಮಸ್ಯೆ.. ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ!! - ಬೆಳ್ತಂಗಡಿ

ನದಿ ಬದಿಗೆ ಸುರಿಯುತ್ತಿದ್ದ ತ್ಯಾಜ್ಯ ಈಗ ಮಾರ್ಗಕ್ಕೆ ಸುರಿಯುವ ಹಂತಕ್ಕೆ ಬಂದು ಮುಟ್ಟಿದೆ. ಸರ್ಕಾರದಿಂದ ಸ್ವಚ್ಛತೆಗಾಗಿ ಹಲವು ಕಾರ್ಯಕ್ರಮಗಳನ್ನು ಅಳವಡಿಸಿದ್ದರೂ ಈ ತ್ಯಾಜ್ಯದ ವಿಲೇವಾರಿಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆ ಕೆಡೆಸಿಕೊಳ್ಳದಿರೋದು ಮಾತ್ರ ದುರಂತ.

garbage
garbage

By

Published : Jun 3, 2020, 5:40 PM IST

ಬೆಳ್ತಂಗಡಿ (ದಕ್ಷಿಣಕನ್ನಡ) :ಪಂಚಾಯತ್​ಗಳ ಗಡಿ ಗೊಂದಲದಿಂದ ನದಿಯಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬಿಸಾಕುವ ತ್ಯಾಜ್ಯ ಕೊಳೆತು ಮಾರಕ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.

ಮಂಗಳೂರು ಚಿಕ್ಕಮಗಳೂರು ರಾಷ್ರ್ಟೀಯ ಹೆದ್ದಾರಿಯ ಮುಂಡಾಜೆ ಮತ್ತು ಚಾರ್ಮಾಡಿ ಪಂಚಾಯತ್ ಗಡಿ ಪ್ರದೇಶದ ಕಾಪು ಎಂಬ ಪ್ರದೇಶದಲ್ಲಿ ಹಲವು ವರ್ಷಗಳಿಂದ ಕೋಳಿ ತ್ಯಾಜ್ಯ ಹಾಗೂ ಇನ್ನಿತರ ಕೊಳೆತ ವಸ್ತುಗಳನ್ನು ಇಲ್ಲಿಯ ಮೃತ್ಯುಂಜಯ ನದಿಗೆ ಬಿಸಾಡಲಾಗುತ್ತಿದೆ. ಇದರ ದುರ್ವಾಸನೆಯಿಂದಾಗಿ ಒಂದು ಕಿ.ಮೀ ದೂರದಿಂದಲೇ ಮೂಗು ಮುಚ್ಚಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆ..

ಅದಲ್ಲದೆ ನೀರು ಕೂಡ ಕಲುಷಿತಗೊಂಡು ಕೃಷಿಕರಿಗೆ ಉಪಯೋಗವಾಗದ ಸ್ಥಿತಿಯಿದೆ. ಇದಕ್ಕೆಲ್ಲ ಕಾರಣ ಪಂಚಾಯತ್​ಗಳೆರಡರ ಗಡಿ ಗೊಂದಲ. ಇದರಿಂದ ತೊಂದರೆ ಅನುಭವಿಸುತ್ತಿರುವುದು ಮಾತ್ರ ಸಾರ್ವಜನಿಕರು. ಚಾರ್ಮಾಡಿ ಪಂಚಾಯತ್ ಅಧ್ಯಕ್ಷರಲ್ಲಿ ಮಾತನಾಡಿದಾಗ, ಈ ತ್ಯಾಜ್ಯ ಬಿಸಾಡುವ ಜಾಗ ನಮ್ಮ ಪಂಚಾಯತ್​ಗೆ ಸಂಬಂಧಪಟ್ಟದ್ದಲ್ಲ. ಅದರೂ ನಮ್ಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಾಂಸದ ಅಂಗಡಿಯವರಿಗೆ ಅಲ್ಲಿ ತ್ಯಾಜ್ಯ ಬಿಸಾಡಬಾರದು, ಬಿಸಾಡಿದ್ದು ಕಂಡು ಬಂದಲ್ಲಿ ಅಂತವರ ಲೈಸನ್ಸ್ ರದ್ದುಗೊಳಿಸುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ತಿಳಿಸಿದರು.

ಇದೇ ರೀತಿ ಇದರ ಬಗ್ಗೆ ಮುಂಡಾಜೆ ಗ್ರಾಪಂ ಅಧ್ಯಕ್ಷರಲ್ಲಿ ಮಾತನಾಡಿದಾಗ, ಆ ತ್ಯಾಜ್ಯ ಹಾಕುವ ಜಾಗ ನಮ್ಮ ಪಂಚಾಯತ್​ಗೆ ಸಂಬಂಧ ಪಟ್ಟದ್ದಲ್ಲ. ಅದು ಚಾರ್ಮಾಡಿ ಪಂಚಾಯತ್​ಗೆ ಸಂಬಂಧ ಪಟ್ಟ ಜಾಗ ಎಂಬುವುದಾಗಿ ತಿಳಿಸಿದರು. ಜಿಲ್ಲಾ ಪಂಚಾಯತ್ ಸದಸ್ಯೆ ನಮಿತ ಪ್ರತಿಕ್ರಿಯಿಸಿ, ಇದು ಹಲವು ವರ್ಷಗಳಿಂದಲೂ ಬಗೆಹರಿಯದ ಸಮಸ್ಯೆ. ಎರಡು ಪಂಚಾಯತ್​ಗಳ ಪಿಡಿಓ ಅವರನ್ನು ಕರೆದು ಮಾತನಾಡುತ್ತೇನೆ. ವೈಜ್ಞಾನಿಕವಾಗಿ ಎರಡೂ ಪಂಚಾಯತ್​ಗಳ ಸಹಕಾರದಲ್ಲಿ ಶಾಶ್ವತ ಪರಿಹಾರ ವ್ಯವಸ್ಥೆ ಮಾಡಲಾಗುವುದು ಎಂದರು.

ನದಿ ಬದಿಗೆ ಸುರಿಯುತ್ತಿದ್ದ ತ್ಯಾಜ್ಯ ಈಗ ಮಾರ್ಗಕ್ಕೆ ಸುರಿಯುವ ಹಂತಕ್ಕೆ ಬಂದು ಮುಟ್ಟಿದೆ. ಸರ್ಕಾರದಿಂದ ಸ್ವಚ್ಛತೆಗಾಗಿ ಹಲವು ಕಾರ್ಯಕ್ರಮಗಳನ್ನು ಅಳವಡಿಸಿದ್ದರೂ ಈ ತ್ಯಾಜ್ಯದ ವಿಲೇವಾರಿಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ತಲೆ ಕೆಡೆಸಿಕೊಳ್ಳದಿರೋದು ಮಾತ್ರ ದುರಂತ. ಆದಷ್ಟೂ ಬೇಗ ಈ ತ್ಯಾಜ್ಯ ಬಿಸಾಡುವವರ ಬಗ್ಗೆ ಗಮನ ಹರಿಸಿ ಕಾನೂನಿನ ಕ್ರಮ ಜರುಗಿಸಬೇಕು ಎನ್ನುತ್ತಾರೆ ನಿತ್ಯ ಪ್ರಯಾಣಿಕರು.

ಜಿಲ್ಲಾಧಿಕಾರಿಗಳೇ ದಯವಿಟ್ಟು ನಮ್ಮ ಈ ಸಮಸ್ಯೆಗೆ ಸೂಕ್ತ ಪರಿಹಾರ ತಿಳಿಸಿ, ನಾವು ಹಲವು ವರ್ಷಗಳಿಂದ ಎರಡು ಪಂಚಾಯತ್​ಗಳಿಗೆ ಹಲವು ಮನವಿ ಮಾಡಿದರೂ ತಮ್ಮ ಗಡಿ ಸಮಸ್ಯೆಯ ಕಾರಣದಿಂದ ನಮಗೆ ನ್ಯಾಯ ದೊರಕಿಲ್ಲ. ನೀವಾದರೂ ಈ ದುರ್ನಾತದಿಂದ ನಮ್ಮನ್ನು ರಕ್ಷಿಸಿ, ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.

ABOUT THE AUTHOR

...view details