ಮಂಗಳೂರು :ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದಕ್ಕೆ ಮಂಗಳೂರು ವಿವಿ ಕುಲಪತಿ ಪ್ರೊ. ಜಯರಾಜ್ ಅಮೀನ್ ಸ್ಪಷ್ಟನೆ ನೀಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸ್ಟೇಡಿಯಂನಲ್ಲಿ ಪ್ರತಿ ವರ್ಷ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಗಣೇಶೋತ್ಸವದ ವೆಚ್ಚವನ್ನು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭರಿಸಲಾಗುತ್ತಿತ್ತು. ಆದರೆ, ಆಡಿಟ್ ವೇಳೆ ಈ ಖರ್ಚಿಗೆ ಆಕ್ಷೇಪ ವ್ಯಕ್ತವಾಗಿತ್ತು.
ಹಾಗಾಗಿ ಈ ಬಾರಿ ಹೊಸದಾಗಿ ನೇಮಕವಾದ ಮಂಗಳೂರು ವಿವಿ ಕುಲಪತಿ ಜಯರಾಜ್ ಅಮೀನ್ ಅವರು ವಿಶ್ವವಿದ್ಯಾನಿಲಯದಿಂದ ಗಣೇಶೋತ್ಸವ ಆಚರಿಸುವ ವಿಚಾರದಲ್ಲಿ ಗೊಂದಲದಲ್ಲಿದ್ದರು. ಇದರ ಜೊತೆಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ವಿಶ್ವವಿದ್ಯಾನಿಲಯದ ಕುಲಪತಿ ಜಯರಾಜ್ ಅಮೀನ್ ಒತ್ತಡ ಹೇರಿ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಕುಲಪತಿ ಜಯರಾಜ್ ಅಮೀನ್ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಲಹೆ ಕೇಳಿದ್ದರು. ಇದೀಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಕುಲಪತಿ ಜಯರಾಜ್ ಅಮೀನ್ ಸ್ಪಷ್ಟನೆ ನೀಡಿದ್ದಾರೆ.