ಮಂಗಳೂರು: ದೇಶದಲ್ಲಿ ಚೌತಿ ಹಬ್ಬಕ್ಕಾಗಿ ಮನೆ ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿಗಳನ್ನು ಇಟ್ಟು ಪೂಜಿಸುವುದು ಸಾಮಾನ್ಯ. ಆದರೆ ದೇಶದ ಈ ಸಂಪ್ರದಾಯವನ್ನು ಅಮೆರಿಕದಲ್ಲಿರುವ ಕುಟುಂಬವೊಂದು ನಿರಂತರವಾಗಿ ಚಾಚೂತಪ್ಪದೆ ಪಾಲಿಸುತ್ತಿದೆ. ಚಿಕಾಗೋದಲ್ಲಿರುವ ಮಂಗಳೂರು ಮೂಲದ ಕುಟುಂಬವೊಂದು ಕಳೆದ 26 ವರ್ಷಗಳಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದೆ.
ಚಿಕಾಗೋದಲ್ಲಿರುವ ಶೆರ್ಲೆಕರ್ ಕುಟುಂಬ ಪ್ರತಿ ವರ್ಷ ತಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ, ಹಬ್ಬವನ್ನು ಆಚರಿಸುತ್ತಾರೆ. ಇದಕ್ಕಾಗಿ ಅವರು ಮಂಗಳೂರಿನ ಮಣ್ಣಗುಡ್ಡೆಯ ಶ್ರೀ ಗಣೇಶ್ ಗೃಹದಲ್ಲಿ ಮಾಡುವ ಗಣೇಶ ಮೂರ್ತಿ ತರಿಸಿಕೊಳ್ಳುವರು. ಕಳೆದ 26 ವರ್ಷಗಳಿಂದ ಗಣೇಶ್ ಗೃಹದಲ್ಲಿ ತಯಾರಾಗುವ ಮೂರ್ತಿಯನ್ನು ಅಮೆರಿಕಕ್ಕೆ ಕಳುಹಿಸಲಾಗುತ್ತಿದೆ. ಈ ಹಿಂದೆ ಇಲ್ಲಿಂದ ಲಂಡನ್ಗೂ ಮೂರ್ತಿಯನ್ನು ಕಳುಹಿಸಲಾಗುತ್ತಿತ್ತು. ಆದರೆ ಕೊರೊನಾ ಬಳಿಕ ಅದು ನಿಂತಿದೆ.
ಅಮೆರಿಕಕ್ಕೆ ಕಳುಹಿಸಲಾಗುವ ಗಣೇಶನ ಮೂರ್ತಿಯನ್ನು ಸುಮಾರು 4.5 ಕೆ ಜಿ ಯ ಒಳಗೆ ನಿರ್ಮಿಸಲಾಗುತ್ತದೆ. 15 ಇಂಚು ಉದ್ದವಿರುವಂತೆ ತಯಾರಿಸಲಾಗುತ್ತದೆ. ಕ್ಯಾಬಿನ್ ಲಗೇಜ್ ಆಗಿ ವಿಮಾನದಲ್ಲಿ ಕೊಂಡೊಯ್ಯಲು 5 ಕೆ ಜಿ ಒಳಗೆ ಇರಬೇಕಾದ ಕಾರಣ, ಅಷ್ಟೇ ಗಾತ್ರದಲ್ಲಿ ಮೂರ್ತಿ ನಿರ್ಮಾಣವಾಗುತ್ತದೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಅದನ್ನು ತೆರೆದು ನೋಡುವಂತೆ ಸಹ ಪ್ಯಾಕ್ ಮಾಡಿ ಕಳುಹಿಸಲಾಗುತ್ತದೆ.
ಮಂಗಳೂರಿನಲ್ಲಿ ತಯಾರಾದ ಗಣೇಶ ಮೂರ್ತಿಗೆ ಅಮೆರಿಕದಲ್ಲಿ ಫೂಜೆ ಗಣೇಶ ಚತುರ್ಥಿಗೆ ಎರಡೂವರೆ ತಿಂಗಳು ಇರುವಾಗಲೇ ಮೂರ್ತಿ ತಯಾರಿಸಲು ಆರಂಭಿಸಲಾಗುತ್ತದೆ. ಗಣೇಶ ಚತುರ್ಥಿಗೆ ಒಂದು ತಿಂಗಳ ಅವಧಿ ಇರುವಾಗ ಆ ಕುಟುಂಬದವರು ಬಂದು ಅಮೆರಿಕಕ್ಕೆ ಮೂರ್ತಿ ಕೊಂಡೊಯ್ಯುತ್ತಾರೆ. ಗಣಪತಿಯನ್ನು ದೊಡ್ಡ ಬಕೆಟ್ನಲ್ಲಿ ನೀರು ಹಾಕಿ ಅದರಲ್ಲಿ ಮುಳುಗಿಸಿ ನಿಮಜ್ಜನೆ ಮಾಡಲಾಗುತ್ತದೆ. ಒಂದು ತಿಂಗಳ ಬಳಿಕ ಅದರ ಮಣ್ಣು ಕರಗಿ ಹೋಗುವುದರಿಂದ ಅದರ ನೀರನ್ನು ಗಿಡಗಳಿಗೆ ಹಾಕುತ್ತಾರೆ. ಈ ರೀತಿಯಲ್ಲಿ ಅಮೆರಿಕದಲ್ಲಿ ಮಂಗಳೂರಿನಿಂದ ಕೊಂಡೊಯ್ದ ಗಣಪತಿಯ ಆರಾಧನೆ ನಡೆಯುತ್ತದೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಗಣೇಶ ಹಬ್ಬಕ್ಕೆ ಭರ್ಜರಿ ಸಿದ್ಧತೆ: ಜಿಲ್ಲಾಡಳಿತದ ನಿಯಮಗಳೇನು?