ಕರ್ನಾಟಕ

karnataka

ETV Bharat / state

ಯಾವುದೇ ಕಾರಣಕ್ಕೂ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ : ಜಿ ಪರಮೇಶ್ವರ್​ ಭವಿಷ್ಯ - ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ವಿಶೇಷ ಒತ್ತು

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುಮತ - ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ - ಮಾಜಿ ಡಿಸಿಎಂ ಜಿ ಪರಮೇಶ್ವರ್​ ಭವಿಷ್ಯ

g-parameshwar
ಮಾಜಿ ಡಿಸಿಎಂ ಜಿ ಪರಮೇಶ್ವರ್

By

Published : Jan 21, 2023, 8:42 PM IST

ಮಾಜಿ ಡಿಸಿಎಂ ಜಿ ಪರಮೇಶ್ವರ್​ ಪ್ರತಿಕ್ರಿಯೆ

ಮಂಗಳೂರು: ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಸಮ್ಮಿಶ್ರ ಸರ್ಕಾರವೂ ರಚನೆ ಆಗುವುದಿಲ್ಲ. ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಮಂಗಳೂರಿನಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಭವಿಷ್ಯ ನುಡಿದರು. ಚುನಾವಣಾ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿರುವ ಅವರು ಶನಿವಾರ ದ.ಕ.ಜಿಲ್ಲಾ ಪ್ರವಾಸದಲ್ಲಿದ್ದು ವಿವಿಧ ವರ್ಗಗಳೊಂದಿಗೆ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದರು.

ಈ ಬಾರಿ ಬಹಳ ಎಚ್ಚರಿಕೆಯಿಂದ ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದೇವೆ. ಆಪರೇಷನ್ ಕಮಲದಲ್ಲಿ ಖರೀದಿಯಾಗುತ್ತಾರೆ ಎಂದು ಅನುಮಾನ ಇರುವವರಿಗೆ ಈ ಬಾರಿ ಟಿಕೆಟ್ ಕೊಡುವುದಿಲ್ಲ. ಬಿಜೆಪಿ 17 ಶಾಸಕರನ್ನು ಖರೀದಿ ಮಾಡುವಷ್ಟು ಕೀಳುಮಟ್ಟಕ್ಕೆ ಹೋಗುತ್ತಾರೆಂದು ನಾವು ನಿರೀಕ್ಷಿಸಿರಲಿಲ್ಲ. ಹಾಗಾಗಿ ನಾವೂ ಪಾಠ ಕಲಿತಿದ್ದೇವೆ‌. ಆದ್ದರಿಂದ ಚುನಾವಣೆಯಲ್ಲಿ ನಾವು ಗೆದ್ದ ಬಳಿಕ ಏನು ಮಾಡಬೇಕೋ ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ​ ಭಿನ್ನಾಭಿಪ್ರಾಯಗಳು ಇವೆ: ಕಾಂಗ್ರೆಸ್​ನಲ್ಲಿ ಒಳಜಗಳ ಇಲ್ಲ. ಆದರೆ ಭಿನ್ನಾಭಿಪ್ರಾಯಗಳು ಇವೆ. ಒಂದು ವಿಚಾರಕ್ಕೆ ವಿಧವಿಧವಾದ ಅಭಿಪ್ರಾಯ ವ್ಯಕ್ತವಾಗೋದು ಸಹಜ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ. ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ ಮಹಿಳೆಯರಿಗೂ ಆದ್ಯತೆ ನೀಡುತ್ತೇವೆ. ಅರ್ಜಿ ಹಾಕಿದವರಲ್ಲದೆ ಗೆಲ್ಲುವ ನಿರೀಕ್ಷೆಯಿದ್ದವರು, ಸಮರ್ಥರನ್ನು ನಾವು ಗುರುತಿಸಿ ಟಿಕೆಟ್ ನೀಡಲಿದ್ದೇವೆ. ಬಿಜೆಪಿಯಿಂದ ಬಂದವರಾದಲ್ಲಿ ಅವರಿಗೆ ಟಿಕೆಟ್ ಕೊಡುವುದಿಲ್ಲ. ಮೊದಲು ಅವರು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಒಪ್ಪಿದಲ್ಲಿ 2 ವರ್ಷಗಳು ನೋಡಿ ಆ ಬಳಿಕ ಟಿಕೆಟ್ ನೀಡುತ್ತೇವೆ ಎಂದರು.

ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ವಿಶೇಷ ಒತ್ತು: ಈ ಬಾರಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಕರಾವಳಿ ಕರ್ನಾಟಕಕ್ಕೆ ಕಾಂಗ್ರೆಸ್ ವಿಶೇಷ ಒತ್ತು ನೀಡುತ್ತದೆ. ಬಿಜೆಪಿ ಆಡಳಿತ ಕರಾವಳಿಯಲ್ಲಿ ಸಮುದಾಯಗಳ ನಡುವೆ ಸಾಮರಸ್ಯ ಇಲ್ಲದಂತೆ ಮಾಡಿದೆ. ಇದು ಕರಾವಳಿಯಲ್ಲಿ ಕೈಗಾರಿಕೆಗಳು ತಲೆಯೆತ್ತಲು, ಮೂಲಸೌಕರ್ಯಗಳ ಅಭಿವೃದ್ಧಿಗೆ ತೊಡಕಾಗಿದೆ‌. ಆದ್ದರಿಂದ ಕೋಮು ಸೌಹಾರ್ದ ವಿಚಾರವೂ ಪ್ರಣಾಳಿಕೆಯಲ್ಲಿ ಇರುತ್ತದೆ ಎಂದರು. ಕಲ್ಯಾಣ ಕರ್ನಾಟಕ, ಚಿತ್ರದುರ್ಗಗಳಲ್ಲಿ ಘೋಷಣೆ ಮಾಡಿರುವ ಹತ್ತು ಅಂಶಗಳ ಪ್ರಣಾಳಿಕೆ, ಬೆಳಗಾವಿಯಲ್ಲಿ ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ 2,000 ರೂ. ಘೋಷಣೆ ಇಷ್ಟೂ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇರುತ್ತದೆ‌ ಎಂದು ತಿಳಿಸಿದರು.

ಕಾರ್ಯಕರ್ತರಿಗೆ ಸಿದ್ದರಾಮಯ್ಯ ಕರೆ:ಇನ್ನು, ಶುಕ್ರವಾರ ಮೈಸೂರಿನಲ್ಲಿ ನಡೆದಿದ್ದ ಸ್ವಾಭಿಮಾನಿ ಪಡೆ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದದ ಆಟ ನಡೆಯಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಜೆಡಿಎಸ್ ಸೋಲಿಸಲು ಕಾರ್ಯಕರ್ತರು ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಲು ಸಂಕಲ್ಪ ತೊಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ವಿಪಕ್ಷ ನಾಯಕ ಕರೆ ನೀಡಿದ್ದರು.

ಜೆಡಿಎಸ್​ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ: ಇದೇ ವೇಳೆ ಜೆಡಿಎಸ್​ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದ ಅವರು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರುವುದು ಕನಸಿನ ಮಾತಾಗಿದೆ ಎಂದು ಟೀಕಿಸಿದ್ದರು. ಅಲ್ಲದೇ ಏಳೆಂಟು ಜಿಲ್ಲೆಗಳಲ್ಲಿ ಶಕ್ತಿ ಹೊಂದಿರುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್​ ಇಪ್ಪತ್ತು ಸ್ಥಾನ ಗೆಲ್ಲುವುದು ಕಷ್ಟವಾಗಿದೆ. ಹಾಗಾಗಿಯೇ ಜೆಡಿಎಸ್​ ಗೆದ್ದೆತ್ತಿನ ಬಾಲ ಹಿಡಿಯುವ ಕೆಲಸ ಮಾಡುತ್ತದೆ. ಜೆಡಿಎಸ್ ಯಾವಾಗಲೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ ಎಂದು ಟೀಕಾ ಪ್ರಹಾರ ನಡೆಸಿದ್ದರು.

ಇದನ್ನೂ ಓದಿ:ಚಾಮುಂಡೇಶ್ವರಿಯಲ್ಲಿ ಈ ಬಾರಿ ಒಳ ಒಪ್ಪಂದ ನಡೆಯೋಲ್ಲ: ಸಿದ್ದರಾಮಯ್ಯ

ABOUT THE AUTHOR

...view details